ಜಮ್ಮು: ಜಿಲ್ಲಾ ಅಭಿವೃದ್ಧಿ ಮಂಡಳಿ ಮತ್ತು ಪಂಚಾಯತ್ ಚುನಾವಣೆಗೆ ಹೈಸ್ಪೀಡ್ ಇಂಟರ್ನೆಟ್ ಸೇವೆ ಬಳಸಿ ಅಡ್ಡಿಯನ್ನುಂಟು ಮಾಡಬಹುದೆಂಬ ಆತಂಕದಿಂದ 20 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ 2ಜಿ ಮೊಬೈಲ್ ಡೇಟಾ ಸೇವೆಯನ್ನು ನವೆಂಬರ್ 26ರವರೆಗೆ ಮುಂದುವರೆಸಲು ಜಮ್ಮು ಮತ್ತು ಕಾಶ್ಮೀರ ಗೃಹ ಇಲಾಖೆ ಗುರುವಾರ ಆದೇಶ ಹೊಡಿಸಿದೆ.
ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಲೀನ್ ಕಬ್ರಾ ನಿನ್ನೆ ರಾತ್ರಿ ಆದೇಶ ಹೊರಡಿಸಿದ್ದು, ಗಂಡೆರ್‌ಬಲ್ ಮತ್ತು ಉಧಾಂಪುರ್ ಜಿಲ್ಲೆಗಳಲ್ಲಿ ಮಾತ್ರ ಹೈಸ್ಪೀಡ್ ಡೇಟಾ ಸೇವೆ ಮುಂದುವರಿಯಲಿದೆ. ಇತರೆಡೆ ಇಂಟರ್ನೆಟ್ ವೇಗವನ್ನು 2ಜಿ ಗೆ ಮಾತ್ರ ಸೀಮಿತಗೊಳಿಸಲಾಗುವುದು ಎಂದು ತಿಳಿಸಿದರು.
ಪೋಸ್ಟ್ ಪೇಯ್ಡ್ ಸಿಮ್-ಕಾರ್ಡ್ ಹೊಂದಿರುವವರಿಗೆ ಇಂಟರ್ನೆಟ್ ಸೇವೆ ಒದಗಿಸಲಾಗುತ್ತದೆ. ಪೋಸ್ಟ್‌ಪೇಯ್ಡ್ ಸಂಪರ್ಕಗಳಿಗೆ ಅನ್ವಯವಾಗುವ ಮಾನದಂಡಗಳನ್ನು ಪರಿಶೀಲಿಸದ ಹೊರತು ಪ್ರಿಪೇಯ್ಡ್ ಸಿಮ್ ಕಾರ್ಡ್‌ಗಳಲ್ಲಿ ಅದೇ ಸೌಲಭ್ಯ ಲಭ್ಯವಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ನಿರ್ದೇಶನಗಳು ಕೂಡಲೇ ಕಾರ್ಯಾರಂಭ ಮಾಡಿ ನವೆಂಬರ್ 26 ರವರೆಗೆ ಜಾರಿಯಲ್ಲಿರುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಡಿಡಿಸಿ ಚುನಾವಣೆಯ 280 ಕ್ಷೇತ್ರಗಳು ಮತ್ತು 13,400 ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಖಾಲಿ ಹುದ್ದೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಗೆ ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳು ಸಮಸ್ಯೆ ಸೃಷ್ಟಿಸಬಹುದು. ಇಂತಹ ಕಾನೂನುಬಾಹಿರ ಕೃತ್ಯಗಳು ಹೈಸ್ಪೀಡ್ ಇಂಟರ್ನೆಟ್ ಸೇವೆಗಳನ್ನು ಅವಲಂಬಿಸಿವೆ. ಹಾಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಕಬ್ರಾ ಮಾಹಿತಿ ನೀಡಿದರು.