ಕೊಚ್ಚಿ( ಕೇರಳ): ಕಳೆದ ಎರಡು ದಿನಗಳಲ್ಲಿ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿವಿಧ ವಿಮಾನಗಳಲ್ಲಿ ಆಗಮಿಸಿದ ಒಟ್ಟು 28 ಪ್ರಯಾಣಿಕರನ್ನು ಕರೋನವೈರಸ್ ಸೋಂಕು ಸಂಬಂಧ ತಪಾಸಣೆ ಮಾಡಲಾಗಿದ್ದು, ಈ ಎಲ್ಲಾ ಪರೀಕ್ಷೆಗಳು ನಕಾರಾತ್ಮಕವಾಗಿವೆ ಎಂದು ಸಿಐಎಲ್ನ ವಕ್ತಾರರು ತಿಳಿಸಿದ್ದಾರೆ.
ಕರೋನ ವೈರಸ್ ಪೀಡಿತ ಪ್ರದೇಶಗಳಿಂದ ಇಲ್ಲಿಗೆ ಆಗಮಿಸಿದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಎಲ್ಲಾ ಪರೀಕ್ಷೆಯಲ್ಲಿ ನಕಾರಾತ್ಮಕ ಫಲಿತಾಂಶ ಬಂದಿರುವುದರಿಂದ ಆತಂಕ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.
ಕೇಂದ್ರದ ಸೂಚನೆಯಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಬರುವ ಪ್ರಯಾಣಿಕರನ್ನು ತಪಾಸಣೆ ನಡೆಸುವ ಉದ್ದೇಶದಿಂದ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ. ಅಲ್ಲದೇ, ಸೋಂಕು ಶಂಕಿತ ಪ್ರದೇಶದಿಂದ ಬರುವ ಪ್ರಯಾಣಿಕರಿಗೆ ಆರೋಗ್ಯ ಸಮಸ್ಯೆಗಳು ಮತ್ತು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಕೌಂಟರ್ಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾದ ಎಲ್ಲಾ ಅಧಿಕಾರಿಗಳಿಗೆ ಮಾಸ್ಕ್ ಮತ್ತು ಕೈಗವಸುಗಳನ್ನು ವಿತರಿಸಲಾಗಿದೆ. ಅಲ್ಲದೆ, ಕೊಚ್ಚಿ ವೈದ್ಯಕೀಯ ಕಾಲೇಜು ಇದಕ್ಕೆ ಕೈ ಜೋಡಿಸಿದ್ದು, ಅಲ್ಲಿನ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಆಂಬ್ಯುಲೆನ್ಸ್ ಸೇರಿದಂತೆ ವಿಶೇಷ ಸಾರಿಗೆ ವ್ಯವಸ್ಥೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕರೋನವೈರಸ್ ನೆಗಡಿಯಿಂದ ಆರಂಭವಾಗಿ ತೀವ್ರತರವಾದ ಕಾಯಿಲೆಗಳಿಗೆ ಕಾರಣವಾಗಿ ಬಲಿಪಡೆದುಕೊಳ್ಳುವ ಹಂತಕ್ಕೆ ತಲುಪುತ್ತದೆ. ಚೀನಾದಲ್ಲಿ ಮೊದಲಿಗೆ ಕಾಣಿಸಿಕೊಂಡಿರುವ ಈ ವೈರಸ್, ಥಾಯ್ಲೆಂಡ್, ಜಪಾನ್ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಭಾರಿ ಭೀತಿಯನ್ನ ಸೃಷ್ಟಿಸಿದೆ. ಈ ಭಯಾನಕ ವೈರಸ್ ಹರಡದಂತೆ ಹಲವು ರಾಷ್ಟ್ರಗಳಲ್ಲಿ ಮುನ್ನೆಚ್ಚರಿಕೆ ಘೋಷಿಸಲಾಗಿದೆ.