ನವದೆಹಲಿ: ಶ್ರಮಿಕ್ ರೈಲು, ಬಸ್ಗಳ ಮೂಲಕ ಈವರೆಗೆ 75 ಲಕ್ಷ ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಸ್ಥಳಗಳಿಗೆ ತಲುಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಒಟ್ಟು 4 ಕೋಟಿ ಜನ ವಲಸೆ ಕಾರ್ಮಿಕರ ಪೈಕಿ 36 ಲಕ್ಷ ಮಂದಿಯನ್ನು ಸ್ವಗ್ರಾಮಗಳಿಗೆ ಸೇರಿಸಲು ಮತ್ತಷ್ಟು ರೈಲುಗಳ ಓಡಿಸುವುದಾಗಿ ಹೇಳಿದೆ
ಮಾರ್ಚ್ 24 ರಂದು ಲಾಕ್‌ಡೌನ್ ಘೋಷಿಸಿದ ಬಳಿಕ ಶ್ರಮಿಕ್ ರೈಲುಗಳ ಮೂಲಕ 35 ಲಕ್ಷ ಹಾಗೂ ಬಸ್ಗಳ ಮೂಲಕ 40 ಲಕ್ಷ ಕಾರ್ಮಿಕರನ್ನು ಸ್ವಂತ ಊರುಗಳಿಗೆ ತಲುಪಿಸಿರುವುದಾಗಿ ಸ್ಪಷ್ಟಪಡಿಸಿದೆ.
ಶೀಘ್ರವೇ 2,600 ಶ್ರಮಿಕ್ ರೈಲುಗಳು
ವಲಸೆ ಕಾರ್ಮಿಕರನ್ನು ಸ್ವಗ್ರಾಮಗಳಿಗೆ ಕಳುಹಿಸಿಕೊಡಲು ಮುಂದಿನ 10 ದಿನಗಳಲ್ಲಿ 2,600 ಶ್ರಮಿಕ್ ರೈಲುಗಳನ್ನು ಆರಂಭಿಸುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ. ಇದರಲ್ಲಿ 36 ಲಕ್ಷ ಮಂದಿ ಕಾರ್ಮಿಕರನ್ನು ಅವರ ಸ್ವಂತ ಸ್ಥಳಗಳಿಗೆ ಸೇರಿಸುವ ಗುರಿ ಹೊಂದಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. 23 ದಿನಗಳಲ್ಲಿ 2,600 ಶ್ರಮಿಕ್ ರೈಲುಗಳು ಸಂಚಾರಿಸಿವೆ. ಕಳೆದ ನಾಲ್ಕು ದಿನಗಳಲ್ಲಿ 260 ರೈಲುಗಳನ್ನು ಓಡಿಸಲಾಗಿದೆ. ಒಟ್ಟು 3 ಲಕ್ಷ ಮಂದಿ ಈ ನಾಲ್ಕು ದಿನಗಳಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 1 ರಿಂದ ದೇಶಾದ್ಯಂತ 200 ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಬುಕ್ಕಿಂಗ್ ಕೂಡ ಆರಂಭವಾಗಿದೆ. ಮೊದಲಿದ್ದ ಟಿಕೆಟ್ ದರವೇ ಇರಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿಕೆ ಯಾದವ್ ಸ್ಪಷ್ಟಪಡಿಸಿದ್ದಾರೆ.
11 ಸಾವಿರ ಕೋಟಿ ಬಿಡುಗಡೆ
ಈವರೆಗೆ ಆಯಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರಿಗಾಗಿ ಸಹಾಯ ಕೇಂದ್ರಗಳನ್ನು ನಿರ್ಮಿಸಿ, ಆಹಾರ, ವಸತಿ ಸೌಲಭ್ಯವನ್ನು ಸರ್ಕಾರ ಕಲ್ಪಿಸಿದೆ. ಇದಕ್ಕಾಗಿ ಏಪ್ರಿಲ್ 3 ರಂದು 11,092 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಆಲಿಸಲು ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಶ್ರಮಿಕ್ ರೈಲಿನಲ್ಲಿ ಪ್ರಯಾಣಿಸುವ ಕಾರ್ಮಿಕರ ಟಿಕೆಟ್ ದರದ ಶೇ. 85ರಷ್ಟು ಕೇಂದ್ರ ಹಾಗೂ ಶೇ.15 ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ಭರಿಸಿವೆ.
ಮಾರ್ಚ್ 24 ರಂದು ಮೊದಲ ಲಾಕ್‌ಡೌನ್ ಘೋಷಿಸಿದ ಪ್ರಧಾನಿ ಮೋದಿ, ಆ ಬಳಿಕ ಮೇ 2, ಮೇ 17 ಮತ್ತು ಮೇ 31ರವರೆಗೆ ಮೂರು ಬಾರಿ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ.