ಬತಿಂಡಾ (ಪಂಜಾಬ್): ಸಿಂಘು ಗಡಿಯಲ್ಲಿ ಕೃಷಿ ಕಾನೂನು ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡು ಹಿಂತಿರುಗಿದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಂಪುರಾ ಫೂಲ್ ಪ್ರದೇಶದ ದಯಾಲ್‌ಪುರ ಮಿರ್ಜಾ ಗ್ರಾಮದಲ್ಲಿ ನಡೆದಿದೆ.
ಮೃತನನ್ನು 22 ವರ್ಷದ ಗುರ್ಲಾಭ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಕೃಷಿ ಕಾನೂನುಗಳ ವಿರುದ್ಧದ ರೈತ ಚಳವಳಿಯಲ್ಲಿ ಭಾಗವಹಿಸಲು ಡಿಸೆಂಬರ್ 3 ರಂದು ದೆಹಲಿಯ ಸಿಂಘು ಗಡಿಗೆ ತೆರಳಿ, ಡಿಸೆಂಬರ್ 18 ರಂದು ಮನೆಗೆ ಹಿಂದಿರುಗಿದ್ದ. ಇಂದು ( ಭಾನುವಾರ) ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಓದಿ: ಸಿಂಘು ಗಡಿಯಲ್ಲಲ್ಲ.. ಡಿ. 25ಕ್ಕೆ ಯುಪಿ ರೈತರೊಂದಿಗೆ ಪ್ರಧಾನಿ ಮೋದಿ ಸಂವಾದ
ವಿಷ ಸೇವಿಸಿ ಅಸ್ವಸ್ಥನಾಗಿದ್ದ ಗುರ್ಲಾಭ್ ಸಿಂಗ್ನನ್ನು ಸ್ಥಳೀಯರು ಮತ್ತು ಮನೆಯವರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ವೈದ್ಯರು ಆತ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ದೆಹಲಿಯಿಂದ ಹಿಂದಿರುಗಿದ್ದ ರೈತ ಗುರ್ಲಾಭ್ ಸಿಂಗ್, ದೆಹಲಿಯ ಹೋರಾಟಕ್ಕೆ ಯಾವುದೇ ಪರಿಹಾರ ಸಿಗುತ್ತಿಲ್ಲ, ಮೋದಿ ಸರ್ಕಾರ ಕಾನೂನು ಹಿಂದೆಗೆದುಕೊಳ್ಳುತ್ತಿಲ್ಲ. ಇದರ ಪರಿಣಾಮವಾಗಿ ನಮ್ಮ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತದೆ ಎಂದು ಕೊರಗುತ್ತಿದ್ದನೆಂದು ಕುಟುಂಬಸ್ಥರು ತಿಳಿಸಿದ್ದಾರೆ.