ಕೃಷ್ಣಗಿರಿ(ತಮಿಳುನಾಡು): ತಮಿಳುನಾಡಿನಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, 21 ವರ್ಷದ ಬೆಂಗಳೂರು ಮೂಲಕ ಬಿಬಿಎ ವಿದ್ಯಾರ್ಥಿನಿವೋರ್ವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಬೆಂಗಳೂರಿನ ಕ್ರೈಸ್ಟ್ ಕಾಲೇಜ್ನಲ್ಲಿ ಅಂತಿಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿರುವ ಸಂಧ್ಯಾ ರಾಣಿ 218 ಮತಗಳ ಅಂತರದಿಂದ ಗೆಲುವು ದಾಖಲು ಮಾಡಿದ್ದಾರೆ. ಕಾಟಿನಾಯಕ್ಕಂತೋಟ್ಟಿ ಗ್ರಾಮ ಪಂಚಾಯ್ತಿ ಮಹಿಳಾ ಮೀಸಲು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಇವರು 1,170 ಮತ ಪಡೆದುಕೊಂಡರೆ ಪ್ರತಿಸ್ಪರ್ಧಿ 950 ಮತ ಪಡೆದುಕೊಂಡಿದ್ದಾರೆ.
ಈಗಾಗಲೇ ಸಂಧ್ಯಾರಾಣಿ ತಂದೆ ಜಯಸಾರಥಿ ಈ ಗ್ರಾಮಪಂಚಾಯ್ತಿ ಅಧ್ಯಕ್ಷರಾಗಿ ಸೇವೆ ಸಲ್ಲಿಕೆ ಮಾಡಿದ್ದಾರೆ. ಈ ಸಲ ತಮ್ಮ ಮಗಳನ್ನ ಈ ಚುನಾವಣೆಗೆ ನಿಲ್ಲಿಸಿದ್ದರು. ಜತೆಗೆ ತಾವು ಈಗಾಗಲೇ ಅಧ್ಯಕ್ಷರಾಗಿ ಕೆಲಸ ಮಾಡಿರುವ ಕಾರಣ ತಮ್ಮ ಕುಟುಂಬದಿಂದ ಇನ್ನೊಬ್ಬರಿಗೆ ಅವಕಾಶ ನೀಡಲು ನಿರ್ಧರಿಸಿದ್ದರು.
ನಾಮಪತ್ರ ಸಲ್ಲಿಕೆ ಮಾಡುವುದಕ್ಕಿಂತಲು ಮುಂಚಿತವಾಗಿ ಕಾಲೇಜ್ ಪ್ರಾಂಶುಪಾಲರಿಂದ ಅನುಮತಿ ಪಡೆದುಕೊಳ್ಳಲಾಗಿತ್ತು ಎಂದು ಅವರ ತಾಯಿ ತಿಳಿಸಿದ್ದು, ಮಗಳು ಕೊನೆ ವರ್ಷದ ಬಿಬಿಎ ಮಾಡುತ್ತಿರುವ ಕಾರಣ ಅಧ್ಯಯನಕ್ಕೆ ಯಾವುದೇ ಅಡ್ಡಿಯಾಗಲ್ಲ ಎಂದು ಹೇಳಿದ್ದಾರೆ.