ನವದೆಹಲಿ: ಭಾರತದ ಗುಪ್ತಚರ ಇಲಾಖೆಯ ಅಧಿಕಾರಿಗಳು ಕಲೆಹಾಕಿದ ಮಾಹಿತಿ ಅನ್ವಯ, ಪಾಕ್ ಆಕ್ರಮಿತ ಕಾಶ್ಮೀರ ವ್ಯಾಪ್ತಿಯ ಗಡಿ ನಿಯಂತ್ರ ರೇಖೆ (ಎಲ್ಒಸಿ) ಬಳಿ ಪಾಕ್ ಬೆಂಬಲಿತ 16 ಉಗ್ರ ತರಬೇತಿ ಶಿಬಿರಗಳು ಸಕ್ರಿಯವಾಗಿವೆ ಎಂಬುದು ತಿಳಿದುಬಂದಿದೆ.
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್ ಮೇಲಿನ ಏರ್ಸ್ಟ್ರೈಕ್ನಿಂದ ತೀವ್ರ ಹೊಡೆತ ತಿಂದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಬಳಿಕ ಇಲ್ಲಿನ ಭಯೋತ್ಪಾದಕರಿಗೆ ಸ್ಥಳೀಯ ಯುವಕರಿಂದ ಯಾವುದೇ ರೀತಿಯ ಬೆಂಬಲ ಸಿಗುತ್ತಿಲ್ಲ. ಉಗ್ರ ನಾಯಕರು ಹಾಗೂ ಕಾರ್ಯಕರ್ತರು ಉದ್ದೇಶಿತ ಭಯೋತ್ಪಾದನೆ ಚಟುವಟಿಕೆಗಳಿಂದೆ ಹಿಂದೆ ಸರಿಯುತ್ತಿದ್ದಾರೆ ಎಂದು ಭದ್ರತಾ ಪಡೆಗಳ ಅಧಿಕಾರಿಗಳು ತಿಳಿಸಿದ್ದಾರೆ.
ಗುಪ್ತಚರ ಸಂಸ್ಥೆಗಳಿಂದ ಬಂದ ವರದಿ ಅನ್ವಯ, ಕಳೆದ ಕೆಲವು ತಿಂಗಳಲ್ಲಿ 16 ಭಯೋತ್ಪಾದನಾ ತರಬೇತಿ ಶಿಬಿರಗಳು ಎಲ್ಒಸಿ ಬಳಿ ಸಕ್ರಿಯವಾಗಿವೆ. ಹೆಚ್ಚುವರಿ ಶಿಬಿರಗಳು ತಲೆ ಎತ್ತಿ ಕಾರ್ಯಚಟುವಟಿಕೆ ವಿಸ್ತರಿಸಿಕೊಳ್ಳುವತ್ತ ಉಗ್ರರು ದೃಷ್ಟಿ ಹಾಯಿಸಿದ್ದಾರೆ ಎಂಬ ಎಚ್ಚರಿಕೆ ರವಾನಿಸಿದ್ದಾರೆ.
ಪಾಕಿಸ್ತಾನ ಸೇನೆ ಹಾಗೂ ಐಎಸ್ಐ ಉಗ್ರ ಚಟುವಟಿಕೆಗಳನ್ನು ಸೂಕ್ಷ್ಮ ರೀತಿಯಲ್ಲಿ ನಿಗಾ ಇರಿಸಿದ್ದೇವೆ, ಗಡಿಯಲ್ಲಿ ಯಾವುದೇ ದುರ್ಘಟನೆ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧರಿದ್ದೇವೆ ಎಂದು ಭದ್ರತಾ ಪಡೆಗಳು ತಿಳಿಸಿವೆ.