ಔರಂಗಾಬಾದ್: ಕೊರೊನಾ ವೈರಸ್ ಭೀತಿ, ಲಾಕ್ಡೌನ್ ಸಂಕಷ್ಟ. ಹೊಟ್ಟೆ ತುಂಬಿಸಿಕೊಳ್ಳಲು ಸಿಗದ ಕೆಲಸ. ಇದೆಲ್ಲದರ ಮಧ್ಯೆ ಬೇರೆ ರಾಜ್ಯದಲ್ಲಿ ಸಿಲುಕಿಕೊಂಡು ನಿತ್ಯ ಅನುಭವಿಸುತ್ತಿರುವ ತೊಂದರೆ. ಇದೇ ಕಾರಣಕ್ಕಾಗಿ ಹೇಗಾದ್ರೂ ಮಾಡಿ ತವರು ಸೇರಿಕೊಳ್ಳಬೇಕು ಎಂಬ ಉದ್ದೇಶದಿಂದ ಅವರೆಲ್ಲರೂ ನಡೆದುಕೊಂಡು ಹೋಗಲು ನಿರ್ಧರಿಸಿದ್ದರು.
ಮಹಾರಾಷ್ಟ್ರದ ಔರಂಗಾಬಾದ್ನ ಬಂದನ್ಪೂರ್ ರೈಲ್ವೆ ಸ್ಟೇಷನ್ ಹಳಿ ಮೇಲೆ ಸಾವನ್ನಪ್ಪಿದ್ದ ಎಲ್ಲರೂ ಹೇಗಾದ್ರೂ ಮಾಡಿ ಮನೆಗೆ ಸೇರಬೇಕು ಎಂಬ ಇರಾದೆಯಲ್ಲೇ ಹೊರಟಿದ್ದರು. ಸರಿ ಸುಮಾರು 36 ಕಿಲೋ ಮೀಟರ್ ಒಟ್ಟಿಗೆ ಕ್ರಮಿಸಿದ್ದ ಇವರೆಲ್ಲರೂ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಂಡು ಮುಂದಿನ ಪ್ರಯಾಣ ಬೆಳೆಸಿದರೆ ಆಯ್ತು ಎಂದು ರೈಲ್ವೆ ಹಳಿ ಮೇಲೆ ಮಲಗಿಕೊಂಡಿದ್ದರು. ಆದರೆ ಗೂಡ್ಸ್ ರೈಲು ಹರಿದು ಸಾವನ್ನಪ್ಪಿದ್ದಾರೆ.
ವಲಸೆ ಕಾರ್ಮಿಕರ ಮೇಲೆ ಹರಿದ ರೈಲು: 16 ಮಂದಿ ದುರ್ಮರಣ, ಕಾರ್ಮಿಕ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ
21 ವಲಸೆ ಕಾರ್ಮಿಕರ ಪೈಕಿ 16 ಮಂದಿ ರೈಲ್ವೆ ಹಳಿ ಮೇಲೆ ಇಬ್ಬರು ಅದರ ಪಕ್ಕದಲ್ಲಿ ಮಲಗಿಕೊಂಡ್ರೆ ಮತ್ತೆ ಮೂವರು ರೈಲ್ವೆ ಹಳಿಯಿಂದ ಸ್ವಲ್ಪ ದೂರದಲ್ಲಿ ನಿದ್ರೆಗೆ ಜಾರಿದ್ದರು. ಇದೇ ವೇಳೆ, ಬಂದ ಗೂಡ್ಸ್ ರೈಲು ಅವರ ಮೇಲೆ ಹರಿದ ಪರಿಣಾಮ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಮಧ್ಯಪ್ರದೇಶದಿಂದ ಮಹಾರಾಷ್ಟ್ರಕ್ಕೆ ಕೂಲಿ ಕೆಲಸಕ್ಕಾಗಿ ತೆರಳಿದ್ದರು.
ಸಾವನ್ನಪ್ಪಿದವರ ಕುಟುಂಬಕ್ಕೆ ಈಗಾಗಲೇ ಮಹಾರಾಷ್ಟ್ರ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ದೇಶದ ವಿವಿಧ ರಾಜ್ಯಗಳಿಂದ ನಡೆದು ಮನೆಗೆ ಸೇರುತ್ತಿರುವ ಸಾವಿರಾರು ವಲಸೆ ಕಾರ್ಮಿಕರು ರೈಲ್ವೆ ಹಳಿ, ರಾಷ್ಟ್ರೀಯ ಹೆದ್ದಾರಿಗಳ ಮೂಲಕವೇ ನಡೆದು ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆ ನಡೆಯದೇ ಹೋದರೆ ಸಾಕು.