ಚೆನ್ನೈ(ತಮಿಳುನಾಡು) : ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಈಗಾಗಲೇ ಹಲವು ರಾಜ್ಯಗಳಲ್ಲಿ ಮದ್ಯದಂಗಡಿಗಳು ಆರಂಭಗೊಂಡಿವೆ. ಅದರಂತೆ ಮೇ 7ರಿಂದ ತಮಿಳುನಾಡಿನಲ್ಲೂ ಮದ್ಯದಂಗಡಿಗಳು ತೆರೆಯುತ್ತಿದ್ದು, ಮದ್ಯಪ್ರಿಯರಿಗೆ ಸಿಹಿ ಸುದ್ದಿ ಜೊತೆ ಕಹಿ ಸುದ್ದಿಯನ್ನೂ ಕೊಟ್ಟಿದೆ.
ಮದ್ಯದ ಮೇಲೆ ಅಬಕಾರಿ ಸುಂಕ ಹೆಚ್ಚಿಸಿರುವ ತಮಿಳುನಾಡು ಸರ್ಕಾರ ಬ್ರಾಂಡ್ಗಳ ಅಧಾರದ ಮೇಲೆ ಬೆಲೆ ಏರಿಸಲು ನಿರ್ಧರಿಸಿದೆ. ವಿದೇಶಿ ಮದ್ಯದ ಮೇಲೆ ಶೇ.15ರಷ್ಟು ಸುಂಕ ಹೆಚ್ಚಿಸಲಾಗಿದ್ದು, ಭಾರತದಲ್ಲಿ ತಯಾರಿಸಿದ ವಿದೇಶಿ ಮದ್ಯದ ಬ್ರಾಂಡ್ಗಳ ಮೇಲೂ ಅಧಿಕ ಸುಂಕ ವಿಧಿಸಲಾಗಿದೆ.
ಸಾಮಾನ್ಯ ಬ್ರಾಂಡ್ಗಳ ಮೇಲೆ ಕ್ವಾರ್ಟರ್ಗೆ 10 ರೂಪಾಯಿ ಏರಿಕೆಯಾಗಿದ್ದರೆ, ಪ್ರೀಮಿಯಂ ಬ್ರಾಂಡ್ಗಳ ಮೇಲೆ 20 ರೂಪಾಯಿ ಹೆಚ್ಚಳ ಮಾಡಲಾಗಿದೆ. ತಮಿಳನಾಡಿನಲ್ಲಿ ಮದ್ಯದ ಅಂಗಡಿಗಳು ಆದಾಯದ ಪ್ರಮುಖ ಮೂಲವಾಗಿದ್ದು, ಬೆಲೆ ಏರಿಕೆ ಮೂಲಕ ಮತ್ತಷ್ಟು ಆದಾಯಗಳಿಸುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಸದ್ಯ ತಮಿಳುನಾಡಿನಾದ್ಯಂತ 5,300 ಮದ್ಯದಂಗಡಿಗಳು ಇದ್ದು, ರಾಜ್ಯಕ್ಕೆ 30 ಸಾವಿರ ಕೋಟಿ ಆದಾಯ ಹರಿದು ಬರುತ್ತಿದೆ. ಈಗ ಅಬಕಾರಿ ಸುಂಕ ಹೆಚ್ಚಿಸುವುದರಿಂದ ಸರ್ಕಾರ ಮತ್ತಷ್ಟು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದೆ.
ಮದ್ಯಕ್ಕಾಗಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಪ್ರದೇಶಗಳಿಗೆ ತೆರಳುತ್ತಿದ್ದ ಜನರ ಸಂಚಾರವನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆಯುವ ನಿರ್ಧಾರ ಕೈಗೊಂಡಿದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದರೂ ಸರ್ಕಾರ ಮದ್ಯದಂಗಡಿ ತೆರಯಲು ಮುಂದಾಗಿರುವುದನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ.
ಇದಕ್ಕೂ ಮುನ್ನ ತಮಿಳುನಾಡು ಸರ್ಕಾರ ಪೆಟ್ರೋಲ್ - ಡೀಸೆಲ್ ಮೇಲೆ ಸುಂಕ ಏರಿಕೆ ಮಾಡಿ, 2,500 ಕೋಟಿ ರೂ. ಆದಾಯ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿತ್ತು.