ಮಹಾರಾಷ್ಟ್ರ: ಉಜ್ಬೇಕಿಸ್ತಾನ್ಗೆ ಪ್ರವಾಸಕ್ಕೆಂದು ತೆರಳಿದ ಮಹಾರಾಷ್ಟ್ರದ ಸೋಲಾಪುರ್ನ 15 ಮಂದಿ ವೈದ್ಯರು ಕೊರೊನಾ ವೈರಸ್ ತಂದಿಟ್ಟ ಪರಿಸ್ಥಿತಿಯಿಂದಾಗಿ ಅಲ್ಲಿಯೇ ಸಿಲುಕುವಂತಾಗಿದೆ.
ಉಜ್ಬೇಕಿಸ್ತಾನ್ನ ತಾಷ್ಕೆಂಟ್ ನಗರದಲ್ಲಿ ಸಿಲುಕಿರುವ ಈ ವೈದ್ಯರುಗಳು, ವಾಟ್ಸ್ ಆಪ್, ಫೇಸ್ಬುಕ್ ಮೂಲಕ ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರನ್ನು ಸಂಪರ್ಕಿಸಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಒಂದು ವಾರದ ಹಿಂದೆ ಪ್ರವಾಸಕ್ಕೆಂದು ಅಲ್ಲಿಗೆ ತೆರಳಿದ್ದ ಅವರು ಇಂದು ಭಾರತಕ್ಕೆ ಹಿಂದಿರುಗಬೇಕಿತ್ತು. ಆದರೆ ವಿಮಾನ ಸೇವೆ ಸ್ಥಗಿತಗೊಳಿಸಲಾಗಿರುವ ಕಾರಣದಿಂದ ಅಲ್ಲಿಯೇ ಉಳಿದಿದ್ದಾರೆ.
ಒಂದು ವಾರದ ಹಿಂದೆ ಉಜ್ಬೇಕಿಸ್ತಾನ್ನಲ್ಲಿ ಯಾವುದೇ ಕೊವಿಡ್-19 ಪ್ರಕರಣಗಳು ವರದಿಯಾಗಿರಲಿಲ್ಲ. ಆದರೆ ಅಲ್ಲಿ ಮಾ.15 ರಂದು ಮೊದಲ ಕೊರೊನಾ ಪ್ರಕರಣ ವರದಿಯಾಗಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅವರನ್ನು ಕರೆತರಬೇಕೆಂದು ವೈದ್ಯರ ಕುಟುಂಬಸ್ಥರು ಹಾಗೂ ವೈದ್ಯಕೀಯ ಸಂಘಟನೆಗಳು ಆಗ್ರಹಿಸಿವೆ.