ನವದೆಹಲಿ: ಪಾರ್ಕ್ ಮಾಡಲಾಗಿದ್ದ 14 ಕಾರುಗಳು ಬೆಂಕಿಯಲ್ಲಿ ಸುಟ್ಟು ಹೋದ ಘಟನೆ ರಾಷ್ಟ್ರ ರಾಜಧಾನಿಯ ವಿವೇಕ್ ವಿಹಾರ ಪೊಲೀಸ್ ಠಾಣೆಯ ಮುಂಭಾಗದ ಖಾಲಿ ಮೈದಾನದಲ್ಲಿ ನಡೆದಿದೆ.
ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ ಮಾಹಿತಿಯಂತೆ, ಇಂದು ನಸುಕಿನ ಜಾವ 2.25ರ ಸುಮಾರಿಗೆ ಅಗ್ನಿ ಶಾಮಕ ಇಲಾಖೆಗೆ ಬೆಂಕಿ ಬಿದ್ದಿರುವ ಬಗ್ಗೆ ಕರೆ ಬಂದಿದೆ. ಕೂಡಲೇ ಸ್ಥಳಕ್ಕೆ ಮೂರು ಅಗ್ನಿ ಶಾಮಕ ದಳ ತಂಡವನ್ನು ಕಳುಹಿಸಲಾಗಿದೆ. ಆದರೆ, ಮೈದಾನದಲ್ಲಿ ನಿಲ್ಲಿಸಲಾಗಿದ್ದ 14 ಕಾರುಗಳು ಅದಾಗಲೇ ಸುಟ್ಟುಹೋಗಿತ್ತು.
ಮಾರಾಟದ ಉದ್ದೇಶದಿಂದ ಹಳೆ ಕಾರುಗಳನ್ನು ಮೈದಾನದಲ್ಲಿ ನಿಲ್ಲಿಸಲಾಗಿತ್ತು. ಸುಮಾರು 3 ಗಂಟೆ ವೇಳೆ ಬೆಂಕಿ ನಿಯಂತ್ರಣಕ್ಕೆ ಬಂದರೂ, ಕಾರುಗಳು ಅದಾಗಲೇ ಸುಟ್ಟು ಹೋಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.