ಬಿಜಾಪುರ್(ಛತ್ತೀಸ್ಗಡ): 12 ವರ್ಷದ ಬಾಲಕಿಯೊಬ್ಬಳು ತೆಲಂಗಾಣದಿಂದ ಛತ್ತಿಸ್ಗಡವರೆಗೆ ನಿರಂತರವಾಗಿ 3 ದಿನಗಳ ಕಾಲ 100 ಕಿಲೋ ಮೀಟರ್ಗೂ ಹೆಚ್ಚು ದೂರ ನಡೆದ ಪರಿಣಾಮ ದಣಿವಿನಿಂದ ಕುಸಿದುಬಿದ್ದು ಸಾವಿಗೀಡಾಗಿದ್ದಾಳೆ.
ಬಾಲಕಿ ಜಮಾಲೋ ಮಡ್ಕಾಮ್ ಬಳಲಿಕೆಯಿಂದ ಸಾವನ್ನಪ್ಪಿದ್ದಾಳೆ ಎಂದು ಬಿಜಾಪುರ್ ಆರೋಗ್ಯಾಧಿಕಾರಿ ಡಾ. ಬಿ. ಆರ್. ಪೂಜಾರಿ ತಿಳಿಸಿದ್ದಾರೆ. ವಿಷಯ ತಿಳಿದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಬಾಲಕಿಯ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಬಾಲಕಿ, ಎರಡು ತಿಂಗಳ ಹಿಂದೆ ಬಿಜಾಪುರ್ ಜಿಲ್ಲೆಯ ಅಡೆಡ್ ಗ್ರಾಮದಲ್ಲಿರುವ ತನ್ನ ಮನೆಯಿಂದ ಕೆಲಸಕ್ಕಾಗಿ ಕೆಲವು ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ತೆಲಂಗಾಣದ ಮೆಣಸಿನಕಾಯಿ ತೋಟಕ್ಕೆ ತೆರಳಿದ್ದಳು.
ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲಸಕ್ಕೆ ತೆರಳಿದ್ದ 11 ಜನರ ಗುಂಪು ಏಪ್ರಿಲ್ 15 ರಂದು ಅವರ ಮನೆಗೆ ತೆರಳಲು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಗಡಿಗಳ ತಪಾಸಣೆ, ಅನುಮತಿ ಮತ್ತು ಸಾರಿಗೆ ಕೊರತೆಯಿಂದಾಗಿ ಅವರು ಮೂರು ದಿನ ನಿರಂತರವಾಗಿ ನಡೆಯಬೇಕಾಯಿತು. ತಮ್ಮ ಊರಿಗೆ ತಲುಪಲು ಕೆಲವೇ ಗಂಟೆಗಳಷ್ಟು ಸಮಯ ಬಾಕಿ ಇರುವಾಗಲೇ ಬೆಳಗ್ಗೆ 8-9ರ ಸುಮಾರಿಗೆ ಬಾಲಕಿ ಸಾವಿಗೀಡಾಗಿದ್ದಾಳೆ ಎಂದು ಹೇಳಲಾಗಿದೆ.
ಇನ್ನು ಕೂಡ ಬಾಲಕಿಯ ಮರಣೋತ್ತರ ಪರೀಕ್ಷೆ ವರದಿ ಬಂದಿಲ್ಲ. ಬಳಲಿಕೆ ಅಥವಾ ನಿರ್ಜಲೀಕರಣದಿಂದಾಗಿ ಸಾವನ್ನಪ್ಪಿರಬಹುದು. ಬಾಲಕಿಗೆ ಕೋವಿಡ್-19 ಪರೀಕ್ಷೆಯನ್ನೂ ಮಾಡಲಾಗಿದ್ದು, ಯಾವುದೇ ಸೋಂಕು ಕಂಡುಬಂದಿಲ್ಲ ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.