ನವದೆಹಲಿ: ಉಡಾನ್ ಯೋಜನೆಯಡಿ 2025 ರ ಒಳಗೆ 100 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2020-21ರ ಬಜೆಟ್ ಮಂಡಿಸಿದ ಸೀತಾರಾಮನ್, 2020-21ರಲ್ಲಿ ಸಾರಿಗೆ ಮೂಲ ಸೌಕರ್ಯಕ್ಕಾಗಿ 1.7 ಲಕ್ಷ ಕೋಟಿ ರೂ. ನೀಡಲಾಗುತ್ತದೆ. ದೇಶದಲ್ಲಿ 1,150 ರೈಲುಗಳು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಕ್ರಮದಲ್ಲಿ ಚಾಲನೆ ಮಾಡುತ್ತದೆ. ಹಾಗೆಯೇ ಖಾಸಗಿ ವಲಯದ ಸಹಾಯದಿಂದ ನಾಲ್ಕು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುವುದು ಎಂದು ಘೋಷಿಸಿದರು.
ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಪ್ರವಾಸಿ ತಾಣಗಳನ್ನು ಸಂಪರ್ಕಿಸಲು ತೇಜಸ್ ಮಾದರಿಯ ರೈಲುಗಳನ್ನು ಸಂಚಾರಕ್ಕೆ ಬಿಡಲು ನಿರ್ಧಾರ ಮಾಡಲಾಗುವುದು ಎಂದ ಅವರು, ರೈಲು ಹಳಿಯ ಜೊತೆಗೆ ಬೃಹತ್ ಸೌರಶಕ್ತಿ ಸಾಮರ್ಥ್ಯವನ್ನು ಸ್ಥಾಪಿಸುವ ಪ್ರಸ್ತಾಪವನ್ನು ಪರಿಗಣಿಸಲಾಗುತ್ತಿದೆ ಎಂದು ಹೇಳಿದರು.