ತಿರುವನಂತಪುರಂ : ಕೋವಿಡ್-19 ಕಂಟ್ರೋಲ್ ರೂಂ 100 ದಿನಗಳನ್ನು ಪೂರೈಸಿದ್ದಕ್ಕಾಗಿ ಕೇರಳದ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಶ್ಲಾಘಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಜನವರಿ 24ರಂದು ಪ್ರಾರಂಭವಾದ ಕೋವಿಡ್-19 ಕಂಟ್ರೋಲ್ ರೂಂ 100 ದಿನ ಪೂರೈಸಿದೆ. ಈ ಅವಧಿಯಲ್ಲಿ ದಿನದ 24 ಗಂಟೆಗಳ ಕಾಲ 18 ಸಮಿತಿಗಳು ಇಲ್ಲಿ ಗಮನಾರ್ಹ ಕೆಲಸ ಮಾಡಿವೆ ಎಂದರು.
ಕೋವಿಡ್-19 ಕಂಟ್ರೋಲ್ ರೂಂ, ಕೊರೊನಾ ಶಂಕಿತರ ಮತ್ತು ಸೋಂಕಿತರ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಆ ಮಾಹಿತಿ ಆಧಾರದಲ್ಲಿ ಪಿಪಿಇ ಕಿಟ್ ಹಾಗೂ ಔಷಧಿಗಳ ಪೂರೈಕೆಯ ಬಗ್ಗೆ ನಿರ್ಧರಿಸಲಾಗುತ್ತದೆ. ಕಂಟ್ರೋಲ್ ರೂಂ ಮಾಡುವ ಇನ್ನೊಂದು ಪ್ರಮುಖ ಕೆಲಸವೆಂದರೆ ಕೋವಿಡ್-19 ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚುವುದು, ಇದು ಅತ್ಯಂತ ನಿರ್ಣಾಯಕ ಕೆಲಸ. ರಾಜಧಾನಿಯ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಕಚೇರಿಯಿಂದ ಕಾರ್ಯನಿರ್ವಹಿಸುತ್ತಿರುವ ಕಂಟ್ರೋಲ್ ರೂಂನಲ್ಲಿ ವೈದ್ಯರು, ಆರೋಗ್ಯ ವೃತ್ತಿಪರರು ಮತ್ತು ಇತರರು ಸೇರಿದಂತೆ 100ಕ್ಕೂ ಹೆಚ್ಚು ಸಿಬ್ಬಂದಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ದೇಶದಲ್ಲೇ ಮೊದಲ ಕೊರೊನಾ ಪ್ರಕರಣ ಕೇರಳದಲ್ಲಿ ಜನವರಿ 30ರಂದು ವರದಿಯಾಗಿತ್ತು. ಆದರೆ, ನಾವು ಜನವರಿ 24 ರಂದೇ ಕಂಟ್ರೋಲ್ ರೂಂ ತೆರೆದಿದ್ದೆವು. 2018ರ ಭೀಕರ ಪ್ರವಾಹ ಮತ್ತು ನಿಪಾ ವೈರಸ್ ನಿಭಾಯಿಸಿದ ಅನುಭವ ನಮಗೆ ಇಲ್ಲಿ ಸಹಕಾರಿಯಾಯಿತು ಎಂದು ಶೈಲಜಾ ಹೇಳಿದರು.