ಆಗ್ರಾ: ದೇಶಾದ್ಯಂತ ಕೋವಿಡ್ ಅಬ್ಬರ ಜೋರಾಗಿದ್ದು, ಈಗಾಗಲೇ ಎಲ್ಲೆಡೆ ಹರಡಿಕೊಂಡಿದೆ. ಇದೀಗ ಉತ್ತರಪ್ರದೇಶದ ಆಗ್ರಾದಲ್ಲಿರುವ ಜೈಲಿಗೂ ಮಹಾಮಾರಿ ವಕ್ಕರಿಸಿಕೊಂಡಿದ್ದು, ಪರಿಣಾಮ 12 ಮಂದಿ ಕೈದಿಗಳಿಗೆ ಈ ಸೋಂಕು ಹಬ್ಬಿದ್ದು ಕನ್ಫರ್ಮ್ ಆಗಿದೆ.
ಮೇ.3ರಂದು 60ವರ್ಷದ ಕೈದಿ ವಿರೇಂದ್ರ ಕುಮಾರ್ ತೀವ್ರ ಅನಾರೋಗ್ಯದ ಕಾರಣ ಎಸ್.ಎಸ್ ಮೆಡಿಕಲ್ ಕಾಲೇಜ್ಗೆ ದಾಖಲು ಮಾಡಲಾಗಿತ್ತು. ಅವರಿಗೆ ಮಾಡಿಸಲಾಗಿದ್ದ ಕೊರೊನಾ ಪರೀಕ್ಷೆ ಪಾಸಿಟಿವ್ ಆಗಿದೆ. ತದನಂತರ ಅವರೊಂದಿಗೆ ಜೈಲಿನಲ್ಲಿದ್ದ 12 ಕೈದಿಗಳಿಗೆ ಗಂಟಲು ಮಾದರಿ ಪರೀಕ್ಷೆ ಮಾಡಿಸಲಾಗಿದ್ದು, ಅದರಲ್ಲಿ 10 ಕೈದಿಗಳಿಗೆ ಕೋವಿಡ್-19 ಇರುವುದು ಕನ್ಫರ್ಮ್ ಆಗಿದೆ. ಇನ್ನು ಜೈಲಿನಲ್ಲಿ ಕೊರೊನಾ ವೈರಸ್ ತಗುಲಿರುವುದು ಹೇಗೆ ಎಂಬುದು ಇಲ್ಲಿಯವರೆಗೆ ನಿಗೂಢವಾಗಿ ಉಳಿದುಕೊಂಡಿದೆ.
ಹೀಗಾಗಿ ಇದೀಗ 1350 ಕೈದಿಗಳು ಹಾಗೂ 112 ಸಿಬ್ಬಂದಿಗೆ ಪರೀಕ್ಷೆ ಮಾಡಿಸಲು ನಿರ್ಧರಿಸಲಾಗಿದೆ ಎಂದು ಆಗ್ರಾ ಜಿಲ್ಲಾಧಿಕಾರಿ ಪಿ.ಎನ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇದರ ಜತೆಗೆ ಸೋಂಕು ದೃಢಪಟ್ಟಿರುವ ಎಲ್ಲ ಕೈದಿಗಳು ಆಪ್ತರು, ಮತ್ತು ಅವರ ಸಂಪರ್ಕಕ್ಕೆ ಬಂದಿರುವ ಎಲ್ಲ ಸಿಬ್ಬಂದಿಗಳನ್ನ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ ಮಾಡಲಾಗುವುದು ಎಂದಿರುವ ಅವರು ಮುಂದಿನ ಆದೇಶ ಹೊರ ಬೀಳುವವರೆಗೂ ಕೈದಿಗಳನ್ನ ಕುಟುಂಬದವರ ಭೇಟಿಯಿಂದ ನಿರ್ಬಂಧಿಸಲಾಗಿದೆ.