ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕೇಂದ್ರ ಸರ್ಕಾರ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದ್ದು, ನಿಯಮ ಉಲ್ಲಂಘಿಸಿ ಅಕ್ರಮ ವಹಿವಾಟು ನಡೆಸುತ್ತಿದ್ದ ಪಾಕ್ ಬೆಂಬಲಿತ 10 ಉಗ್ರರನ್ನು ಭಾರತದ ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ.
ಪಾಕ್ ಮೂಲದ 10 ಉಗ್ರಗಾಮಿಗಳು ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಶಸ್ತ್ರಾಸ್ತ್ರ, ನಕಲಿ ಕರೆನ್ಸಿ ಮತ್ತು ಮಾದಕ ದ್ರವ್ಯ ಸಾಗಿಸಿ ಭಯೋತ್ಪಾದನಾ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದರು. ಜೊತೆಗೆ ಭಾರತದ ನಿಷೇಧ ನಿಯಮ ಉಲ್ಲಂಘಿಸಿದ್ದರು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ 10 ಉಗ್ರರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಹತ್ತು ಉಗ್ರರು ಕಾಶ್ಮೀರ ಮೂಲದವರಾಗಿದ್ದು, 1990ರಲ್ಲಿ ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ನ ಉಗ್ರರ ತರಬೇತಿ ಕೇಂದ್ರಗಳಿಗೆ ಸೇರಿದ್ದಾರೆ. ವ್ಯಾಪಾರಿಗಳ ಸೋಗಿನಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಬಂಧಿತರ ಬಳಿ ಗಡಿ ನಿಯಂತ್ರಣ ರೇಖೆಯ ವ್ಯಾಪಾರಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಉಗ್ರರು, ಗಡಿ ವ್ಯಾಪಾರದಲ್ಲಿ ಬಂದ ಹಣವನ್ನು ಭಯೋತ್ಪಾದಕ ಸಂಘಟನೆಗಳಿಗೆ ಹಾಗೂ ಕಾಶ್ಮೀರದ ಪ್ರತ್ಯೇಕವಾದಿಗಳಿಗೆ ವರ್ಗಾವಣೆ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಬಂಧಿತ ಉಗ್ರರನ್ನು ಬಶರತ್ ಅಹಮದ್ ಭಟ್, ಶಬ್ಬಿರ್ ಇಲ್ಲಾಹಿ, ಶೌಕತ್ ಅಹಮದ್ ಭಟ್, ನೂರ್ ಮೊಹಮ್ಮದ್ ಘಾನಿ, ಖುರ್ಷಿದ್, ಇಮ್ತಿಯಾಝ್ ಅಹ್ಮದ್ ಖಾನ್, ಅಮೀರ್, ಸೈಯಾದ್ ಅಝಜ್ ಅಹ್ಮದ್ ಶಾ, ಮೆಹ್ರಾಜುದ್ದೀನ್ ಭಟ್ ಮತ್ತು ನಜೀರ್ ಅಹ್ಮದ್ ಎಂದು ಗುರುತಿಸಲಾಗಿದೆ.