ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿದೆ. ಇಂದು 10 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಅಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ದೇಶದಲ್ಲೇ ಅತಿ ಹೆಚ್ಚು ಸೋಂಕಿತರಿರುವ ರಾಜ್ಯ ಇದಾಗಿದೆ.
ಮುಂಬೈನಲ್ಲಿ 6 ಮಂದಿ ಹಾಗೂ ಪುಣೆಯಲ್ಲಿ 4 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ ಎಂದು ಮಹಾರಾಷ್ಟ್ರದ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ, ಎರಡನೇ ಸ್ಥಾನದಲ್ಲಿ ಕೇರಳ, ನಂತರದ ಸ್ಥಾನಗಳಲ್ಲಿ ದೆಹಲಿ, ಉತ್ತರ ಪ್ರದೇಶ, ತೆಲಂಗಾಣ ರಾಜ್ಯಗಳಿದ್ದು ಟಾಪ್ 5 ಕೊವಿಡ್-19 ಸೋಂಕಿತ ರಾಜ್ಯಗಳಾಗಿವೆ. 20 ಪ್ರಕರಣಗಳೊಂದಿಗೆ ಕರ್ನಾಟಕ ಏಳನೇ ಸ್ಥಾನದಲ್ಲಿದೆ.
ವಿಶ್ವದಲ್ಲೇ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,07, 280 ಇದೆ. ಈವರೆಗೂ 13,049 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ವೈದ್ಯರ ಪರಿಶ್ರಮದಿಂದ 92, 376 ಮಂದಿ ಗುಣಮುಖರಾಗಿದ್ದಾರೆ. ಚೀನಾದಲ್ಲಿ 81, 348 ಮಂದಿ ಕೊರೊನಾ ಪೀಡಿತರಿದ್ದಾರೆ. ಇದಾನಂತರ ಇಟಲಿಯಲ್ಲಿ 53, 578 ಮಂದಿ ಕೊರೊನಾದಿಂದ ನರಳುತ್ತಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಪ್ರಕಾರ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 341ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಹೊಸದಾಗಿ 10 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ.
ಚೀನಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದರೂ ಸಾವಿನ ಸಂಖ್ಯೆಯಲ್ಲಿ ಇಟಲಿ ಮುಂದಿದೆ. ಇಟಲಿಯಲ್ಲಿ ಈವರೆಗೂ 4,825 ಮಂದಿ ಕೊರೊನಾ ಕಾರಣಕ್ಕೆ ಮೃತಪಟ್ಟಿದ್ದಾರೆ. ನಂತರದ ಸ್ಥಾನದಲ್ಲಿ ಚೀನಾ ಇದ್ದು ಒಟ್ಟು 3,144 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಭಾರತದಲ್ಲಿ ಏಳು ಮಂದಿ ಕೊರೊನಾದ ಕಾರಣಕ್ಕೆ ಮೃತಪಟ್ಟಿದ್ದಾರೆ.
ಸಿಂಗಾಪುರದಲ್ಲಿ 47 ಕೊರೊನಾ ಸೋಂಕಿತರ ಪಟ್ಟಿಗೆ ಸೇರ್ಪಡೆ, 432ಕ್ಕೇರಿದ ಸೋಂಕಿತರ ಸಂಖ್ಯೆ
ಸಿಂಗಾಪುರದಲ್ಲಿ 47 ಮಂದಿ ಕೊರೊನಾ ಸೋಂಕಿತರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಅಲ್ಲಿ ಕೊರೊನಾ ಪೀಡಿತರ ಒಟ್ಟು ಸಂಖ್ಯೆ 432ಕ್ಕೆ ಏರಿಕೆಯಾಗಿದೆ. ಇದರಲ್ಲಿ 39 ಮಂದಿ ವಿದೇಶಿಗರಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ವಿದೇಶಿಗರು ಯೂರೋಪ್, ಉತ್ತರ ಅಮೇರಿಕಾ, ಆಗ್ನೇಯ ಏಷಿಯಾ,ಹಾಗೂ ಏಷ್ಯಾದ ಇತರ ಭಾಗಗಳಿಂದ ಬಂದವರೆಂದು ಅಲ್ಲಿನ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಸುರಕ್ಷತಾ ಕ್ರಮಗಳನ್ನು ಉಲ್ಲಂಘನೆ ಕಾರಣಕ್ಕೆ 89 ಮಂದಿ ವಿದೇಶಿಗರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.