ಆಂಧ್ರಪ್ರದೇಶ: ವಿಶಾಖಪಟ್ಟಣಂನಲ್ಲಿನ ಎಲ್ಜಿ ಪಾಲಿಮರ್ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿರುವ ಕಾರಣ 11 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಬಳಿಕ ಸಂತ್ರಸ್ತ ಕುಟುಂಬಗಳಿಗೆ ತಲಾ 1 ಕೋಟಿ ರೂ ಪರಿಹಾರ ಘೋಷಿಸಿದರು.
ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 10 ಲಕ್ಷ ರೂ, ಸಣ್ಣಪುಟ್ಟ ಗಾಯಗಳಾಗಿರುವವರಿಗೆ ತಲಾ 1 ಲಕ್ಷ ರೂ ನೀಡಲಾಗುವುದು ಎಂದು ಪ್ರಕಟಿಸಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಇದರ ಜತೆಗೆ ಪ್ರಾಥಮಿಕ ಚಿಕಿತ್ಸೆಗೆ ತಲಾ 25 ಸಾವಿರ ರೂಪಾಯಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.
ಮುಂದಿನ ಎರಡು ದಿನಗಳ ಕಾಲ ವಿಶಾಖಪಟ್ಟಣಂನಲ್ಲಿ ಉಳಿದುಕೊಂಡು ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದಾಗಿ ಅವರು ತಿಳಿಸಿದ್ದು, ಸರ್ಕಾರದ ಕಡೆಯಿಂದ 1 ಕೋಟಿ ರೂ ಪರಿಹಾರ ಘೋಷಣೆ ಮಾಡಿದ್ದು, ಕಂಪನಿ ಪರಿಹಾರ ಘೋಷಣೆ ಮಾಡುವುದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.