ಚಂಡೀಗಢ್: ಕೋವಿಡ್ ಸೋಂಕಿನ ನಂತರದ ತೊಂದರೆಗಳಿಂದಾಗಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಕಿರಿಯ ಸಹೋದರನ ಪುತ್ರ ಅಭಯ್ ಸಿಂಗ್ ಸಂಧು ಅವರು ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸಂಧು (63) ಅವರ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಪಂಜಾಬ್ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿಧು, ಸಾಮಾಜಿಕ ಕಾರ್ಯಕರ್ತ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾದರು. ಅಲ್ಲಿ ಅವರು ಕೋವಿಡ್-19 ಬಳಿಕದ ಆರೋಗ್ಯ ಸಂಬಂಧಿತ ತೊಡಕುಗಳಿಂದ ಚೇತರಿಸಿಕೊಳ್ಳಲಿಲ್ಲ ಎಂದರು
ಸಂಧು ಅವರ ನಿಧನಕ್ಕೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ಸಂತಾಪ ಸೂಚಿಸಿದ್ದು, ದೀರ್ಘಕಾಲದ ಅನಾರೋಗ್ಯದ ನಂತರ ನಿಧನರಾದ ಶಾಹೀದ್-ಎ-ಅಜಮ್ ಭಗತ್ ಸಿಂಗ್ ಅವರ ಸಹೋದರ ಮಗ ಅಭಯ್ ಸಿಂಗ್ ಸಂಧು ಅವರ ನಿಧನದ ಸುದ್ದಿ ತಿಳಿದು ದುಃಖಿತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅವರ ಕುಟುಂಬಕ್ಕೆ ನನ್ನ ಸಂತಾಪ. ಅವರ ಚಿಕಿತ್ಸೆಗೆ ಕುಟುಂಬಸ್ಥರು ಮಾಡಿದ ವೆಚ್ಚವನ್ನು ನಾವು ಭರಿಸುತ್ತೇವೆ. ವಾಹೇ ಗುರು ಅವರಿಗೆ ಚಿರ ಶಾಂತಿ ನೀಡಲಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಸಂಧು ಭಗತ್ ಸಿಂಗ್ ಅವರ ಕಿರಿಯ ಸಹೋದರ ಕುಲ್ಬೀರ್ ಸಿಂಗ್ ಅವರ ಮಗ. ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನಕ್ಕೆ ತಮ್ಮ ಬೆಂಬಲ ನೀಡಿದ್ದರು.