ಮುಂಬೈ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳೆದ ವಾರ ಬಂಧಿಸಲಾಗಿರುವ ರಿಪಬ್ಲಿಕ್ ಟಿವಿ ಮಾಲೀಕ ಮತ್ತು ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ಆರೋಗ್ಯ ಮತ್ತು ಭದ್ರತೆ ಕುರಿತು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರೊಂದಿಗೆ ರಾಜ್ಯಪಾಲ ಕೋಶಿಯಾರಿ ಮಾತುಕತೆ ಸಹ ನಡೆಸಿದ್ದಾರೆ. ಬಂಧಿತ ಗೋಸ್ವಾಮಿ ಅವರು ಅವರ ಕುಟುಂಬವನ್ನು ನೋಡಲು ಮತ್ತು ಅವರೊಂದಿಗೆ ಮಾತನಾಡಲು ಸರ್ಕಾರ ಅವಕಾಶ ಮಾಡಿಕೊಡಬೇಕೆಂದು ಮಹಾರಾಷ್ಟ್ರ ರಾಜ್ಯಪಾಲರು ತಿಳಿಸಿರುವುದಾಗಿ ಅಲ್ಲಿನ ಕಚೇರಿ ಖಚಿತಪಡಿಸಿದೆ.
ವ್ಯಕ್ತಿಯೊಬ್ಬನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆ ನ. 4 ರಂದು ಗೋಸ್ವಾಮಿ ಅವರನ್ನು ರಾಯಗಡ್ ಪೊಲೀಸರು ಬಂಧಿಸಿದ್ದರು. ಮುಂಬೈಯಲ್ಲಿನ ನಿವಾಸದಲ್ಲಿ ಬಂಧಿಸಿದ ನಂತರ ಅವರನ್ನು ಅಲಿಬಾಗ್ ಚೀಫ್ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ನ. 18ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಅಲಿಬಾಗ್ ನ್ಯಾಯಾಲಯದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸುನೈನಾ ಪಿಂಗಲೆ ತೀರ್ಪು ನೀಡಿದ್ದರು.
ಅಲಿಬಾಗ್ ಕಾರಾೃಗೃಹದ ಕೋವಿಡ್-19 ಸೆಂಟರ್ ಆಗಿ ಪರಿವರ್ತಿಸಲಾಗಿದ್ದ ಸ್ಥಳೀಯ ಶಾಲೆಯಲ್ಲಿ ಗೋಸ್ವಾಮಿಯನ್ನು ಇರಿಸಲಾಗಿತ್ತು. ಆದರೆ, ನ್ಯಾಯಾಂಗ ಬಂಧನ ಅವಧಿಯಲ್ಲಿ ಮೊಬೈಲ್ನಲ್ಲಿ ಮಾತನಾಡಿದ್ದು ಕಂಡುಬಂದ ಹಿನ್ನೆಲೆ ಭಾನುವಾರ ತಾಳೋಜ ಜೈಲಿಗೆ ಗೋಸ್ವಾಮಿಯನ್ನು ಸ್ಥಳಾಂತರ ಮಾಡಲಾಗಿದೆ.
ಇನ್ನು ಕಸ್ಟಡಿ ಬದಲಾವಣೆಯನ್ನು ವಿರೋಧಿಸಿರುವ ಅರ್ನಾಬ್ ಅವರ ಪತ್ನಿ ಸಂಬ್ರಾತಾ ರೇ ಗೋಸ್ವಾಮಿ ಅವರು, ತಮ್ಮ ಪತಿಯನ್ನು ಇಂದು ಬೆಳಗ್ಗೆ ತಾಳೋಜ ಜೈಲಿಗೆ ಕರೆದೊಯ್ಯುವಾಗ ಮಹಾರಾಷ್ಟ್ರ ಪೊಲೀಸರು ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾರೆ.
ತನ್ನ ಜೀವಕ್ಕೆ ಅಪಾಯವಿದೆ ಎಂದು ಪತಿ ಪದೇ ಪದೇ ಹೇಳುತ್ತಿದ್ದಳು. ಅಲ್ಲದೇ ತಮ್ಮ ವಕೀಲರನ್ನು ಭೇಟಿಯಾಗಲು ಜೈಲರ್ಗೆ ಒತ್ತಾಯಿಸಿದಾಗ ಭೇಟಿಗೆ ನಿರಾಕರಿಸಿದ್ದಲ್ಲದೇ ಥಳಿಸಿದ್ದಾರೆ. ನನ್ನ ಪತಿ ಬೆದರಿಕೆ ಹಾಗೂ ಹಲ್ಲೆ ಕುರಿತು ಈಗಾಗಲೇ ಬಹಿರಂಗವಾಗಿಯೇ ವಿವರಿಸಿದ್ದಾರೆ. ನನ್ನ ಗಂಡನಿಗೆ ಏನಾದರೂ ಆದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಸಂಬ್ರಾತಾ ರೇ ಗೋಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಬಿಜೆಪಿ ಮುಖಂಡ ಕಿರೀಟ್ ಸೋಮಯ್ಯ ಜೈಲಿಗೆ ಧಾವಿಸಿ ಗೋಸ್ವಾಮಿ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿದರು.