ಗೂಗಲ್ ಪ್ಲೇ ಸ್ಟೋರ್ನಲ್ಲಿ ಕೆಲವೊಂದು ಡೇಂಜರಸ್ ಆಡ್ವೇರ್ಗಳು ಹಾಗೂ ಡೇಟಾ ಕಳವು ಮಾಡುವ ಮಾಲ್ವೇರ್ ಆ್ಯಪ್ಗಳಿರುವುದನ್ನು ಸೈಬರ್ ಸೆಕ್ಯೂರಿಟಿ ತಜ್ಞರು ತಿಂಗಳ ಹಿಂದೆ ಪತ್ತೆ ಮಾಡಿದ್ದರು. ಅದರಲ್ಲಿನ ಐದು ಆ್ಯಪ್‌ಗಳು ಈವರೆಗೂ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವುದು ಶಾಕಿಂಗ್ ನ್ಯೂಸ್ ಆಗಿದೆ. ಈ ಡೇಂಜರಸ್ ಆ್ಯಪ್‌ಗಳು ಎರಡೂ ಮಿಲಿಯನ್ಗೂ ಹೆಚ್ಚು ಬಾರಿ ಡೌನ್ಲೋಡ್ ಬೇರೆ ಆಗಿರುವುದು ಕಳವಳ ಮೂಡಿಸಿದೆ.
ಸ್ಪೈವೇರ್ ಆ್ಯಪ್‌ಗಳು ಇತರ ಆ್ಯಪ್ಗಳ ಡೇಟಾವನ್ನು ಸಹ ಕಳವು ಮಾಡುತ್ತವೆ ಎಂಬುದು ಗೊತ್ತಿರಲಿ. ಆ್ಯಂಡ್ರಾಯ್ಡ್ ಫೋನುಗಳಿಗೆ ಈಗ ಆ್ಯಡ್ವೇರ್ ಆ್ಯಪ್ಗಳ ಮತ್ತು ಡೇಟಾ ಕಳವು ಮಾಡುವ ಟ್ರೋಜನ್ಗಳ ದಾಳಿಯ ಭೀತಿ ಬಹಳ ಹೆಚ್ಚಾಗಿದೆ. ಇವುಗಳಿಂದ ಹೇಗೆ ಬಚಾವಾಗಬಹುದು ಎಂಬುದನ್ನು ಪ್ರತಿಯೊಬ್ಬ ಆ್ಯಂಡ್ರಾಯ್ಡ್ ಬಳಕೆದಾರರು ತಿಳಿದುಕೊಳ್ಳುವುದು ಅಗತ್ಯ.
ಆ್ಯಂಡ್ರಾಯ್ಡ್ ಮಾಲ್ವೇರ್ ಹೇಗೆ ಕೆಲಸ ಮಾಡುತ್ತದೆ?
ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಆ್ಯಂಡ್ರಾಯ್ಡ್ ಮಾಲ್ವೇರ್ ನಿಮ್ಮ ಫೋನಿಗೆ ಬೇಡವಾದ ಜಾಹೀರಾತುಗಳನ್ನು ಕಳುಹಿಸಲಾರಂಭಿಸಬಹುದು. ಇದರಿಂದ ಬ್ಯಾಟರಿ ಬೇಗನೇ ಮುಗಿದು ಹೋಗಬಹುದು, ಫೋನ್ ಸಿಕ್ಕಾಪಟ್ಟೆ ಬಿಸಿಯಾಗಬಹುದು, ಬಳಕೆದಾರರು ಬಯಸಿದಂತೆ ಪೋನ್ ಕೆಲಸ ಮಾಡದಿರಬಹುದು ಹಾಗೂ ನಿಮಗೆ ಗೊತ್ತಾಗದೆ ಹಣಕಾಸು ವ್ಯವಹಾರಗಳು ನಡೆಯಬಹುದು. ಇನ್ನು ಈ ಆ್ಯಂಡ್ರಾಯ್ಡ್ ಮಾಲ್ವೇರ್ ಫೋನಿಗೆ ಅಗತ್ಯವಾದ ಆ್ಯಪ್ ಒಂದರ ರೀತಿಯಲ್ಲಿ ತನ್ನನ್ನು ಬಚ್ಚಿಟ್ಟುಕೊಳ್ಳಬಹುದು. ಯಾವ್ಯಾವುದೋ ಜಾಹೀರಾತುಗಳನ್ನು ನೀವು ನೋಡುವಂತೆ ಮಾಡಿ ಈ ಆ್ಯಪ್‌ಗಳು ಹಣ ಮಾಡಬಹುದು.
ಡೇಟಾ ಕಳವು ಮಾಡುವ ಮಾಲ್ವೇರ್ಗಳು ಸಹ ಬಹಳವೇ ಅಪಾಯಕಾರಿ. ಇವು ನಿಮ್ಮ ಸೋಷಿಯಲ್ ಮೀಡಿಯಾ, ಬ್ಯಾಂಕ್ ಖಾತೆಗಳ ಪಾಸ್ವರ್ಡ್ ಹಾಗೂ ಲಾಗಿನ್ ಮಾಹಿತಿಗಳನ್ನು ಕಳವು ಮಾಡಬಲ್ಲವು.
ನಿಮ್ಮ ಫೋನಿನಲ್ಲಿ ಈ ಮಾಲ್ವೇರ್ಗಳಿದ್ದರೆ ತಕ್ಷಣ ಡಿಲೀಟ್ ಮಾಡಿ:
- ಪಿಪ್ ಪಿಕ್ ಕ್ಯಾಮೆರಾ ಫೋಟೊ ಎಡಿಟರ್ (PIP Pic Camera Photo Editor): ಈ ಆ್ಯಪ್ ಈಗಾಗಲೇ 1 ಮಿಲಿಯನ್ಗೂ ಹೆಚ್ಚು ಬಾರಿ ಡೌನ್ಲೋಡ್ ಆಗಿದೆ. ಇಮೇಜ್ ಎಡಿಟಿಂಗ್ ಸಾಫ್ಟ್ವೇರ್ನಲ್ಲಿ ಅಡಗಿರುವ ಮಾಲ್ವೇರ್ ನಿಮ್ಮ ಫೇಸ್ಬುಕ್ ಲಾಗಿನ್ ಹಾಗೂ ಪಾಸ್ವರ್ಡ್ ಕಳವು ಮಾಡುತ್ತದೆ.
- ವೈಲ್ಡ್ ಆ್ಯಂಡ್ ಎಕ್ಸೋಟಿಕ್ ಎನಿಮಲ್ ವಾಲ್ ಪೇಪರ್ (Wild and Exotic Animal Wallpaper): ಇದೊಂದು ರೂಪ ಬದಲಾಯಿಸುವ ಮಾಲ್ವೇರ್ ಆಗಿದೆ. ಸಿಮ್ ಟೂಲ್ ಕಿಟ್ ಎಂದು ತನ್ನ ಹೆಸರು ಬದಲಾಯಿಸಿಕೊಂಡು ಬ್ಯಾಟರಿ ಸೇವಿಂಗ್ ಆಪ್ಷನ್ನಿಂದ ಹೊರತಾಗಿಸಿಕೊಳ್ಳುತ್ತದೆ. ಇದು 5 ಲಕ್ಷ ಬಾರಿ ಡೌನ್ಲೋಡ್ ಆಗಿದೆ.
- ಝೋಡಿ ಹೋರೊಸ್ಕೋಪ್ - ಫಾರ್ಚ್ಯೂನ್ ಫೈಂಡರ್ (Zodi Horoscope - Fortune Finder): ಫೇಸ್ಬುಕ್ ಐಡಿ ಪಾಸ್ವರ್ಡ್ ಕದಿಯುವ ಮತ್ತೊಂದು ಮಾಲ್ವೇರ್ ಇದಾಗಿದೆ. 5 ಲಕ್ಷ ಬಾರಿ ಡೌನ್ಲೋಡ್ ಆಗಿದೆ.
- ಪಿಪ್ ಕ್ಯಾಮೆರಾ 2022 (PIP Camera 2022) : ಕ್ಯಾಮೆರಾ ಎಫೆಕ್ಟ್ ರೂಪದಲ್ಲಿರುವ ಇದು ಫೇಸ್ ಬುಕ್ ಐಡಿ ಪಾಸ್ ವರ್ಡ್ ಕದಿಯುತ್ತದೆ. 50 ಸಾವಿರ ಡೌನ್ಲೋಡ್ ಆಗಿದೆ.
- ಮ್ಯಾಗ್ನಿಫೈಯರ್ ಫ್ಲ್ಯಾಶ್ ಲೈಟ್ (Magnifier Flashlight): ವಿಡಿಯೋ ಹಾಗೂ ಸ್ಟ್ಯಾಟಿಕ್ ಬ್ಯಾನರ್ ಆ್ಯಪ್ ಆಗಿರುವ ಇದೊಂದು ಮಾಲ್ವೇರ್ ಆಗಿದೆ.