ನವದೆಹಲಿ/ಬೆಂಗಳೂರು: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಕೊರೊನಾ ಸಕ್ರಿಯ ಪ್ರಕರಣಗಳಿರುವ ಟಾಪ್ ಟೆನ್ ಜಿಲ್ಲೆಗಳನ್ನು ಪಟ್ಟಿ ಮಾಡಿದ್ದು, ಅದರಲ್ಲಿ ಬೆಂಗಳೂರು ನಗರವೂ ಸೇರಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಧ್ಯಮಗೋಷ್ಟಿ ನಡೆಸಿದ್ದು, ದೇಶದಲ್ಲಿ ಕೊರೊನಾ ಸೋಂಕಿತರು ಹೆಚ್ಚಿರುವ ಮೊದಲ ಹತ್ತು ಜಿಲ್ಲೆಗಳನ್ನ ಘೋಷಿಸಿದ್ದಾರೆ. ಇವುಗಳಲ್ಲಿ 9 ಜಿಲ್ಲೆಗಳು ಮಹಾರಾಷ್ಟ್ರಕ್ಕೆ ಸೇರಿದವುಗಳಾಗಿದ್ದು, ಒಂದು ಜಿಲ್ಲೆ ಕರ್ನಾಟಕದ ಬೆಂಗಳೂರು ನಗರವಾಗಿದೆ.
ಮಹಾರಾಷ್ಟ್ರ ರಾಜ್ಯದ ಪುಣೆ, ನಾಗಪುರ, ಥಾಣೆ, ನಾಸಿಕ್, ಔರಂಗಾಬಾದ್, ನಾಸಿಕ್, ಮುಂಬೈ, ನಾಂದೇಡ್, ಜಲಗಾಂವ್, ಅಕೋಲಾ ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೇರಳ ಹಣಾಹಣಿಗೆ ಎನ್ಡಿಎ ಪ್ರಣಾಳಿಕೆ : ಕುಟುಂಬಕ್ಕೊಂದು ಉದ್ಯೋಗ ಸೇರಿ ಹಲವು ಭರವಸೆ
ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದೆಡೆಯಾದರೆ, ಮಹಾರಾಷ್ಟ್ರ ಮತ್ತು ಪಂಜಾಬ್ನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಜನಸಂಖ್ಯಾ ಅನುಪಾತಕ್ಕೆ ಹೋಲಿಕೆ ಮಾಡುವುದಾದರೆ ಈ ರಾಜ್ಯಗಳಲ್ಲಿ ಕೋವಿಡ್ ಪ್ರಮಾಣ ತೀವ್ರವಾಗಿದೆ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ವಿವರಿಸಿದ್ದಾರೆ.
ಈಗಾಗಲೇ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಹೊಸದಾಗಿ ಬೀಡ್ ಜಿಲ್ಲೆಯಲ್ಲಿ ಮಾರ್ಚ್ 26ರಿಂದ ಏಪ್ರಿಲ್ 4ರವರೆಗೆ ಅಂದರೆ 10 ದಿನ, ಪರ್ಭಾನಿಯಲ್ಲಿ ಏಳು ದಿನಗಳ ಕಾಲ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ನಾಂದೇಡ್ ಜಿಲ್ಲೆಯಲ್ಲಿ 25 ಮಾರ್ಚ್ನಿಂದ ಏಪ್ರಿಲ್ 4ರವರೆಗೆ ಲಾಕ್ಡೌನ್ಗೆ ಆದೇಶಿಸಲಾಗಿದೆ.