ನವದೆಹಲಿ: ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಕ್ರಮವಾಗಿ 65 ಮತ್ತು 67 ವರ್ಷಗಳಿಗೆ ಹೆಚ್ಚಿಸಲು ಸಂವಿಧಾನ ತಿದ್ದುಪಡಿ ಮಾಡುವುದಕ್ಕೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ನೇತೃತ್ವದ ವಕೀಲರ ಸಂಘಟನೆಗಳು ಸರ್ವಾನುಮತದಿಂದ ಬೆಂಬಲ ಸೂಚಿಸಿವೆ.
ಪ್ರಸ್ತುತ ವಿಚಾರಣಾ ನ್ಯಾಯಾಲಯದ ನ್ಯಾಯಾಂಗ ಅಧಿಕಾರಿಗಳು, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರು ಕ್ರಮವಾಗಿ 60, 62 ಮತ್ತು 65ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ. ವಕೀಲರು ವಿಶೇಷವಾಗಿ ಉನ್ನತ ಮಟ್ಟದ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ.
ಕಳೆದ ವಾರ ನಡೆದ ಎಲ್ಲ ರಾಜ್ಯಗಳ ಬಾರ್ ಕೌನ್ಸಿಲ್‌ಗಳು, ಹೈಕೋರ್ಟ್ ಬಾರ್ ಅಸೋಸಿಯೇಶನ್‌ಗಳ ಪದಾಧಿಕಾರಿಗಳು ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಜಂಟಿ ಸಭೆಯಲ್ಲಿ ಉಚ್ಚ ನ್ಯಾಯಾಲಯ ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರ ನಿವೃತ್ತಿಯ ವಯೋಮಿತಿ ಹೆಚ್ಚಿಸುವ ಬಗ್ಗೆ ಚರ್ಚಿಸಲಾಗಿದೆ.
ಚರ್ಚೆಯಲ್ಲಿ ಬಂದ ವಿಷಯವನ್ನು ಸಂಪೂರ್ಣವಾಗಿ ಪರಿಗಣಿಸಲಾಗಿದ್ದು, ನಂತರ ಆ ಬಗ್ಗೆ ಸಭೆಯು ಸರ್ವಾನುಮತದಿಂದ ತೀರ್ಮಾನಕ್ಕೆ ಬಂದಿತು. ಸಂವಿಧಾನಕ್ಕೆ ತಕ್ಷಣದ ತಿದ್ದುಪಡಿಯನ್ನು ಮಾಡಬೇಕು ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯಸ್ಸು 62 ರಿಂದ 65 ವರ್ಷಕ್ಕೆ ಹೆಚ್ಚಿಸಬೇಕು. ಸುಪ್ರೀಂಕೋರ್ಟ್ ನ್ಯಾಯಾಧೀಶರ ನಿವೃತ್ತಿಯ ವಯಸ್ಸನ್ನು 67 ವರ್ಷಕ್ಕೆ ಹೆಚ್ಚಿಸಬೇಕು ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ವಿವಿಧ ಆಯೋಗಗಳು ಮತ್ತು ಸರ್ಕಾರದ ಸಂಸ್ಥೆಗಳ ಅಧ್ಯಕ್ಷರ ಹುದ್ದೆಗೆ ಅನುಭವಿ ವಕೀಲರನ್ನೂ ಪರಿಗಣಿಸಬೇಕೆಂದು ಸಂಸತ್ತಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ವಕೀಲರ ಜಂಟಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇದನ್ನೂ ಓದಿ: ಐತಿಹಾಸಿಕ ತೀರ್ಪುಗಳ ಮೂಲಕ ನ್ಯಾಯಾಂಗದ ಮೇಲಿನ ವಿಶ್ವಾಸ ಹೆಚ್ಚಿಸಿದ ಸಿಜೆಐ ಎನ್.ವಿ. ರಮಣ