ಚೆನ್ನೈ: ಮದ್ರಾಸ್ ಐಐಟಿ ತಂತ್ರಜ್ಞಾನ ಅನ್ವೇಷಣೆ ವಿಭಾಗವಾದ ಐಐಟಿ ಮದ್ರಾಸ್ ಪ್ರವರ್ತಕ್ ಫೌಂಡೇಶನ್ನಿಂದ ಬ್ಯಾಂಕಿಂಗ್ ಹಾಗೂ ಹಣಕಾಸು ಕ್ಷೇತ್ರದಲ್ಲಿ ಆಸಕ್ತರಿಗೆ ಕೌಶಲ್ಯವರ್ಧನಾ ಕೋರ್ಸ್ ಲಭ್ಯವಿದೆ. ಈ ಕೋರ್ಸ್ಗಳಿಗೆ ನೋಂದಣಿ ಆರಂಭವಾಗಿದೆ.
ಚೆನ್ನೈನಲ್ಲಿ ಹಣಕಾಸು ವಲಯದಲ್ಲಿ ಪ್ರಮುಖವಾಗಿರುವ ಇನ್ಫ್ಯಾಕ್ಟ್ಪ್ರೋ ಜೊತೆ ಮದ್ರಾಸ್ ಐಐಟಿಯ ಡಿಜಿಟಲ್ ಸ್ಕಿಲ್ಸ್ ಅಕಾಡೆಮಿ ಸಹಭಾಗಿತ್ವದಲ್ಲಿ ಕೋರ್ಸ್ ನಡೆಯಲಿವೆ. ಇನ್ಫ್ಯಾಕ್ಟ್ಪ್ರೋವು ಬ್ಯಾಂಕಿಂಗ್ ಹಾಗೂ ಹಣಕಾಸು ಸೇವೆಗಳು ಮತ್ತು ವಿಮಾ ವಲಯದಲ್ಲಿನ ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಸ್ಕಿಲ್ ಕೌನ್ಸಿಲ್ನ ತರಬೇತಿ ಪಾಲುದಾರಿಕೆ ಹೊಂದಿದೆ.
ಬ್ಯಾಂಕಿಂಗ್ ವೃತ್ತಿ ಆಯ್ಕೆ ಮಾಡಿಕೊಳ್ಳಲು ಪ್ರತಿವರ್ಷ ಸುಮಾರು 30 ಲಕ್ಷ ಆಕಾಂಕ್ಷಿತರು ವಿವಿಧ ಬ್ಯಾಂಕ್ ನೇಮಕಾತಿ ಪರೀಕ್ಷೆಗಳನ್ನು ಬರೆಯುತ್ತಾರೆ. ಆದರೆ, ಇವರಲ್ಲಿ ಕೇವಲ ಶೇ. 0.5ರಷ್ಟು ಮಂದಿ ಮಾತ್ರ ಉತ್ತೀರ್ಣರಾಗುತ್ತಾರೆ. ಈ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ವೃದ್ಧಿಸಿಕೊಂಡರೆ ತಮಗಿಷ್ಟವಾದ ವೃತ್ತಿಗಳಲ್ಲಿ ಮತ್ತಷ್ಟು ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಬ್ಯಾಂಕಿಂಗ್ ಹಾಗೂ ಹಣಕಾಸು ವಲಯದ ಉದ್ಯೋಗಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಅದರಲ್ಲೂ ತರಬೇತಿ ಪಡೆದಿರುವವರಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೌಶಲ್ಯ ವರ್ಧನಾ ಕೋರ್ಸ್ ಪಡೆಯಲು ಒಂದು ಉತ್ತಮ ಅವಕಾಶವನ್ನು ಮದ್ರಾಸ್ ಐಐಟಿ ಕಲ್ಪಿಸುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಮುಂದಿನ ವೆಬ್ಸೈಟ್ಗಳಲ್ಲಿ ಪಡೆಯಬಹುದಾಗಿದೆ. https://iit.infactpro.com ಅಥವಾ https://skillsacademy.iitm.ac.in.
ಓದಿ: ಬಳಸಿದಷ್ಟು ಹಣ ಪಾವತಿಸಿ.. ಹೊಸ ವಾಹನ ಪಾಲಿಸಿಯ ಲಾಭಗಳೆಷ್ಟು ಗೊತ್ತೇ?