ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಿದರು. ವಿಮಾನ ನಿಲ್ದಾಣದ ಟರ್ಮಿನಲ್-2 (T-2) "ಟರ್ಮಿನಲ್-ಇನ್-ಎ-ಗಾರ್ಡನ್" ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಂಡಿದೆ. ಇದು ಈ ರೀತಿಯ ಮೊದಲ ಟರ್ಮಿನಲ್ ಆಗಿದೆ.
ಹೊಸ ಟರ್ಮಿನಲ್ನ 5 ವಿಶೇಷತೆಗಳು ಇಲ್ಲಿವೆ:
- ಒಟ್ಟು 2,55,645 ಚದರ ಮೀಟರ್ ಪ್ರದೇಶದಲ್ಲಿ ಹರಡಿರುವ ಟರ್ಮಿನಲ್, 22 ಸಂಪರ್ಕ ಗೇಟ್‌ಗಳನ್ನು ಮತ್ತು ಒಂಬತ್ತು ಕಸ್ಟಮ್ಸ್ ಹ್ಯಾಂಡ್ ಬ್ಯಾಗೇಜ್ ಸ್ಕ್ರೀನಿಂಗ್ ಹೊಂದಿದೆ. ಗೇಟ್ ಲಾಂಜ್ 5,953 ಆಸನ ಸಾಮರ್ಥ್ಯವನ್ನು ಹೊಂದಿದೆ.
- ಟರ್ಮಿನಲ್-2 ರ ಮೊದಲ ಹಂತವು 15 ಬಸ್ ಗೇಟ್‌ಗಳು, 90 ಚೆಕ್-ಇನ್ ಸಲ್ಯೂಶನ್ಸ್ ಮತ್ತು 17 ಭದ್ರತಾ ಚೆಕ್ ಲೇನ್‌ಗಳನ್ನು ಹೊಂದಿರುತ್ತದೆ ಮತ್ತು ಪ್ರತಿ ವರ್ಷ 25 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುತ್ತದೆ.
- 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಟರ್ಮಿನಲ್ ಅನ್ನು ವಾಸ್ತುಶಿಲ್ಪದ ಅದ್ಭುತ ಎಂದು ಪರಿಗಣಿಸಲಾಗಿದೆ. ಇದು ಒಳಗೆ ಮತ್ತು ಹೊರಗೆ ಹಚ್ಚ ಹಸಿರಿನಿಂದ ಕೂಡಿರುತ್ತದೆ ಮತ್ತು ಪ್ರಯಾಣಿಕರಿಗೆ ಉದ್ಯಾನದಲ್ಲಿ ನಡೆಯುತ್ತಿರುವ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
- ಟರ್ಮಿನಲ್ ಅನ್ನು ನಾಲ್ಕು ಮಾರ್ಗದರ್ಶಿ ತತ್ವಗಳ ಮೇಲೆ ನಿರ್ಮಿಸಲಾಗಿದೆ - 'ಟರ್ಮಿನಲ್ ಇನ್ ಎ ಗಾರ್ಡನ್' ಸುಸ್ಥಿರತೆ, ತಂತ್ರಜ್ಞಾನ ಮತ್ತು ನಾವೀನ್ಯತೆ ಮತ್ತು ಕರ್ನಾಟಕದ ಕಲೆ ಮತ್ತು ಸಂಸ್ಕೃತಿ. ಉದ್ಯಾನ ನಗರಿ ಬೆಂಗಳೂರಿನ ಅನ್ವರ್ಥಕವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.
- ಕರ್ನಾಟಕ ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ವಿಶಿಷ್ಟ ಕಲಾ ಪ್ರಕಾರಗಳನ್ನು ಉದ್ಯಾನ ಮತ್ತು ಕಲಾ ಸ್ಥಾಪನೆಗಳ ಮೂಲಕ ಪ್ರದರ್ಶಿಸಲಾಗುವುದು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದ ಸೊಬಗು ಹೆಚ್ಚಿಸಿದ ಹೊಸ ಟರ್ಮಿನಲ್ 2: ಮನ ತುಂಬುವ ಸುಂದರ ಫೋಟೋಗಳು