ಡೆಹ್ರಾಡೂನ್ (ಉತ್ತರಾಖಂಡ್): ಉತ್ತರಾಖಂಡ ರಾಜ್ಯ ವಿಶಿಷ್ಟ ಜೀವವೈವಿಧ್ಯತೆಗೆ ಪ್ರಸಿದ್ಧಿ ಪಡೆದಿದೆ. ವಿಶ್ವದಲ್ಲಿ ಬೇರೆಲ್ಲೂ ಕಾಣಸಿಗದ ಅಪರೂಪದ ಜೀವಸಂಕುಲ ಇಲ್ಲಿನ ಪರ್ವತ ಶ್ರೇಣಿಗಳಲ್ಲಿದೆ. ಹೀಗಾಗಿಯೇ ಈ ಪ್ರದೇಶವನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯುವುದುಂಟು. ವಿಭಿನ್ನ ಜೀವರಾಶಿಗಳು ಕೂಡಾ ಉತ್ತರಕಾಶಿಯಲ್ಲಿ ಕಾಣಸಿಗುತ್ತವೆ. ಈ ಪ್ರದೇಶ ಸಮುದ್ರ ಮಟ್ಟದಿಂದ 14,200 ಅಡಿಗಳಷ್ಟು ಎತ್ತರದಲ್ಲಿದ್ದು, ಹಿಮದಿಂದ ಆವೃತವಾಗಿದೆ.
ಉತ್ತರ ಕಾಶಿ ಜಿಲ್ಲೆಯ ಬಂದರ್ಪಂಚ್ ಪರ್ವತವು ಪ್ರಸಿದ್ಧ ಸರೋವರ ದೋಡಿಟಲ್ನಿಂದ 40 ಕಿಲೋ ಮೀಟರ್ ದೂರದಲ್ಲಿದ್ದು, ಇಲ್ಲಿಗೆ ತೆರಳಲು ಗುಡ್ಡ ಬೆಟ್ಟ ಹತ್ತಿಳಿಯುವುದು ಬಿಟ್ಟರೆ ಬೇರೆ ವಾಹನದ ವ್ಯವಸ್ಥೆ ಇಲ್ಲ. ಬಮ್ಸಾರಿ ಪರ್ವತ ಶ್ರೇಣಿಯ ತಪ್ಪಲಲ್ಲಿ ಬ್ರಹ್ಮಕಮಲ ಸೇರಿ ಅನೇಕ ಸುಂದರ ಹೂವುಗಳು ಅರಳುತ್ತವೆ. ಈ ದೃಶ್ಯ ಕಣ್ಣಿಗೆ ಹಬ್ಬವೆನಿಸುತ್ತದೆ. ಇದಾದ ಬಳಿಕ ಬಮ್ಸಾರಿ ಸರೋವರ ಎದುರಾಗುತ್ತದೆ.
ಸುಮಾರು 500 ಮೀಟರ್ ಪ್ರದೇಶದಲ್ಲಿ ಹರಡಿರುವ ಈ ಸರೋವರವು ಭಾಗಶಃ ಮಂಜಿನಿಂದ ಆವೃತವಾಗಿರುತ್ತದೆ. ಈ ಸರೋವರದ ಕೆಳಗಿನಿಂದ ಬಂದರ್ಪಂಚ್ ಹಾಗೂ ಪೂರ್ವ-ಪಶ್ಚಿಮದಲ್ಲಿ ಮಂಜಿನಿಂದ ಆವೃತವಾಗಿರುವ ಪರ್ವತಗಳ ಸುಂದರ ನೋಟ ಸವಿಯಬಹುದು. ಯಮುನಾ ನದಿಯ ಉಪನದಿ ಹನುಮಾನ್ ಗಂಗಾ ಬಂದರ್ಪಂಚ್ ಪರ್ವತದಲ್ಲಿ ಹುಟ್ಟಿಕೊಂಡಿದೆ.
ಬಮ್ಸಾರು ತಾಲ್ ಚಾರಣ ವೇಳೆ ವಿವಿಧ ಸಸ್ಯ ವರ್ಗಗಳನ್ನು ಕಣ್ತುಂಬಿಕೊಳ್ಳಬಹುದು. ಅಲ್ಲದೆ ವಿವಿಧ ಪ್ರಾಣಿಗಳನ್ನು ಈ ವೇಳೆ ಕಾಣಬಹುದು. ಬುರಾನ್ಸ್, ಸಿಲ್ವರ್ ಮರಗಳು, ಡಿಯೋಡರ್ ಸೀಡರ್ ಮತ್ತು ಓಕ್ಸ್ ಮರಗಳಿಂದ ತುಂಬಿರುವ ದಟ್ಟ ಅರಣ್ಯ ಪ್ರದೇಶ ಸಹ ಎದುರಾಗುತ್ತದೆ. ಈ ಪ್ರದೇಶದಲ್ಲಿ ಹನುಮಾನ್ ಗಂಗಾ ಸೇರಿ ಹಲವು ಉಪನದಿಗಳು ಹುಟ್ಟಿ ಕಣಿವೆಗಳ ನಡುವೆ ಹರಿಯುತ್ತವೆ.
ಒಂದೇ ಸ್ಥಳದಲ್ಲಿ ಹಿಮ ಹೊದ್ದಿರುವ ಪರ್ವತಗಳು, ನದಿ, ಸರೋವರ ಜೊತೆಗೆ ದಟ್ಟ ಅರಣ್ಯ ಸೌಂದರ್ಯ ಸವಿಯಲು ಈ ಪ್ರದೇಶ ಉತ್ತಮವಾಗಿದೆ. ಹೀಗಾಗಿ ಈ ಪ್ರದೇಶವನ್ನ ದೇವಭೂಮಿ ಅಂತಲೂ ಕರೆಯಲಾಗುತ್ತದೆ. ಸ್ಥಳೀಯರು ಈ ಜಾಗವನ್ನು ಭೀಮತಾಲ್ ಅಂತಲೂ ಕರೆಯುತ್ತಾರೆ. ನೀವು ಪರಿಸರದ ಆರಾಧಕರಾಗಿದ್ದರೆ ಈ ವೈವಿಧ್ಯಮಯ ಪ್ರದೇಶ್ಕಕೆ ಒಮ್ಮೆ ಭೇಟಿ ನೀಡಿ ಅದ್ಭುತ ಅನುಭವ ಪಡೆಯಿರಿ.