ಬಂಡಾ(ಉತ್ತರ ಪ್ರದೇಶ): ಮಧ್ಯಪ್ರದೇಶದ ಛತ್ತರ್ಪುರದಿಂದ ಉತ್ತರ ಪ್ರದೇಶದ ಬಂಡಾ ಜಿಲ್ಲೆಗೆ ಆಗಮಿಸುತ್ತಿದ್ದ ಯುವತಿಯೋರ್ವಳ ಮೇಲೆ ಕಾಮುಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಯುವತಿ ವಿರೋಧ ವ್ಯಕ್ತಪಡಿಸಿದ್ದರಿಂದ ಆಕೆಯನ್ನ ರೈಲಿನಿಂದ ಹೊರ ಎಸೆದಿದ್ದಾನೆ. ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಧ್ಯಪ್ರದೇಶಧ ರಾಜ್ನಗರದ ಬಳಿ ಈ ಅಮಾನವೀಯ ಘಟನೆ ನಡೆದಿದೆ.
ಖಜುರಾಹೊ-ಮಹೋಬಾ ಪ್ಯಾಸೆಂಜರ್ ರೈಲಿನಲ್ಲಿ 25 ವರ್ಷದ ಅವಿವಾಹಿತ ಯುವತಿ ಪ್ರಯಾಣ ಮಾಡ್ತಿದ್ದಳು. ಆಕೆಯ ಪಕ್ಕದಲ್ಲೇ ಕುಳಿತುಕೊಂಡಿದ್ದ ವ್ಯಕ್ತಿ ಆಕೆಗೆ ನಿಂದಿಸಿದ್ದು, ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಈ ವೇಳೆ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಆತನ ಕೈಗೆ ಕಚ್ಚಿದ್ದಾಳೆ. ಇದರಿಂದ ಆಕ್ರೋಶಗೊಂಡಿರುವ ವ್ಯಕ್ತಿ, ಯುವತಿಯ ಕೂದಲು ಹಿಡಿದು ರೈಲಿನಲ್ಲಿ ಎಳೆದಾಡಿದ್ದು, ನಂತರ ಹೊರಗೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮೂರು ದಿನ ಮೋದಿ ವಿದೇಶ ಪ್ರವಾಸ.. 25 ಸಭೆಗಳಲ್ಲಿ ಭಾಗಿಯಾಗಲಿರುವ ಪ್ರಧಾನಿ
ಲಭ್ಯವಾಗಿರುವ ಮಾಹಿತಿ ಪ್ರಕಾರ, ಯುವತಿ ಏಕಾಂಗಿಯಾಗಿ ರೈಲಿನಲ್ಲಿ ಬರುತ್ತಿರುವ ಮಾಹಿತಿ ಅರಿತಿದ್ದ ಕಾಮುಕನು ಆಕೆಯ ಮೇಲೆ ದುಷ್ಕೃತ್ಯವೆಸಗಲು ಮುಂದಾಗಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಆಕೆಯನ್ನ ರೈಲಿನಿಂದ ಹೊರಕ್ಕೆ ಎಸೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಯುವತಿ ಮಧ್ಯಪ್ರದೇಶದ ಖಜುರಾಹೋ ಆಸ್ಪತ್ರೆಗೆ ದಾಖಲಾಗಿದ್ದು, ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ್ದಾಳೆ. ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಎಸೆದಿರುವ ರಭಸಕ್ಕೆ ಯುವತಿಯ ದೇಹದಲ್ಲಿನ ಕೆಲ ಮೂಳೆಗಳು ಮುರಿದಿವೆ. ಘಟನಾ ಸ್ಥಳಕ್ಕೆ ಝಾನ್ಸಿ ರೈಲ್ವೆ ವಿಭಾಗದ ಕಮಿಷನರ್ ಅಲೋಕ್ ಕುಮಾರ್ ಭೇಟಿ ನೀಡಿದ್ದಾರೆ. ಈ ವೇಳೆ ಆರೋಪಿಯನ್ನ ಆದಷ್ಟು ಬೇಗ ಬಂಧಿಸುವ ಭರವಸೆ ನೀಡಿದ್ದಾರೆ.