ನವದೆಹಲಿ: ದೇಶದ ಕಂಡ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಒಂದಾದ ಒಡಿಶಾದ ಬಾಲಸೋರ್ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಶನಿವಾರ ಚಾರ್ಜ್ಶೀಟ್ ಸಲ್ಲಿಸಿದೆ. ಈಗಾಗಲೇ ಬಂಧಿತ ರೈಲ್ವೆ ಇಲಾಖೆಯ ಮೂವರು ಅಧಿಕಾರಿಗಳ ವಿರುದ್ಧ ಭುವನೇಶ್ವರದಲ್ಲಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 2ರಂದು ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದ ಸಮೀಪ ತ್ರಿವಳಿ ರೈಲು ದುರಂತ ಸಂಭವಿಸಿತ್ತು. ಕೋರಮಂಡಲ್ ಎಕ್ಸ್‌ಪ್ರೆಸ್ ನಿಂತಿದ್ದ ಸರಕು ರೈಲಿಗೆ ಗುದ್ದಿತ್ತು. ನಂತರ ಇದರ ಕೆಲವು ಹಳಿತಪ್ಪಿದ ಕೋಚ್‌ಗಳು ಪಕ್ಕದ ಹಳಿಗಳ ಮೇಲೆ ಬಿದ್ದಿದ್ದವು. ಇದರಿಂದ ಎದುರಿಗೆ ಬರುತ್ತಿದ್ದ ಯಶವಂತಪುರ - ಹೌರಾ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು. ಇದರಲ್ಲಿ 296 ಜನರು ಸಾವನ್ನಪ್ಪಿದ್ದರು ಮತ್ತು1,200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದುರಂತ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ರೈಲ್ವೆ ಮಂಡಳಿ ವಹಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯ ಉದ್ದೇಶವಲ್ಲದ ಅಪರಾಧಿತ ನರಹತ್ಯೆ ಮತ್ತು ಸಾಕ್ಷ್ಯನಾಶದ ಆರೋಪದ ಮೇಲೆ ರೈಲ್ವೆ ಇಲಾಖೆಯ ಮೂವರು ಅಧಿಕಾರಿಗಳಾದ ಅರುಣ್ ಕುಮಾರ್ ಮಹಂತ, ಅಮೀರ್ ಖಂಡ್ ಮತ್ತು ಪಪ್ಪು ಕುಮಾರ್ ವಿರುದ್ಧ ಚಾರ್ಜ್ ಶೀಟ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: Balasore Train Accident: ಸಿಬಿಐನಿಂದ ಮೂವರು ರೈಲ್ವೆ ಸಿಬ್ಬಂದಿ ಬಂಧನ
ತ್ರಿವಳಿ ರೈಲು ದುರಂತ ಕುರಿತು ತನಿಖೆ ಆರಂಭಿಸಿದ್ದ ಸಿಬಿಐ ಅಧಿಕಾರಿಗಳು, ಜುಲೈ 7ರಂದು ಬಾಲಸೋರ್ ಜಿಲ್ಲೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಹಿರಿಯ ಸೆಕ್ಷನ್ ಇಂಜಿನಿಯರ್ (ಸಿಗ್ನಲ್ಸ್) ಅರುಣ್ ಕುಮಾರ್ ಮಹಂತ, ಸೆಕ್ಷನ್ ಇಂಜಿನಿಯರ್ ಅಮೀರ್ ಖಂಡ್ ಮತ್ತು ಟೆಕ್ನಿಷಿಯನ್ ಪಪ್ಪು ಕುಮಾರ್ನನ್ನು ಬಂಧಿಸಿದ್ದರು. ಭುವನೇಶ್ವರದಲ್ಲಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 304 (II) (ಉದ್ದೇಶವಲ್ಲದ ಅಪರಾಧಿತ ನರಹತ್ಯೆ) ಹಾಗೂ ಸೆಕ್ಷನ್ 34 ಮತ್ತು ರೈಲ್ವೆ ಕಾಯ್ದೆ 153ರಡಿ ಸಿಬಿಐ ಆರೋಪ ಹೊರಿಸಿದೆ.
ಬಹನಾಗಾ ಬಜಾರ್ ನಿಲ್ದಾಣದ ಬಳಿಯ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 94ರ ದುರಸ್ತಿ ಕಾರ್ಯಕ್ಕೆ ಹಿರಿಯ ಸೆಕ್ಷನ್ ಇಂಜಿನಿಯರ್ ಮಹಂತ ಎಲ್‌ಸಿ ಗೇಟ್ ನಂ.79ರ ಸರ್ಕ್ಯೂಟ್ ರೇಖಾಚಿತ್ರವನ್ನು ಬಳಸಿಕೊಂಡು ಮಾಡಿದ್ದಾರೆ. ಅಲ್ಲದೇ, ಅಸ್ತಿತ್ವದಲ್ಲಿರುವ ಸಿಗ್ನಲ್ ಮತ್ತು ಇಂಟರ್‌ಲಾಕಿಂಗ್ ಅಳವಡಿಕೆಗಳ ಪರೀಕ್ಷೆ, ಕೂಲಂಕಷ ಪರೀಕ್ಷೆ ಹಾಗೂ ಬದಲಾವಣೆಗಳನ್ನು ಕೈಗೊಳ್ಳುವುದು ಅನುಮೋದಿತ ಯೋಜನೆ ಮತ್ತು ಸೂಚನೆಗಳಿಗೆ ಅನುಸಾರವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಆರೋಪಿಗಳ ಕರ್ತವ್ಯವಾಗಿತ್ತು ಎಂದು ಸಿಬಿಐ ಆರೋಪಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಒಡಿಶಾ ತ್ರಿವಳಿ ರೈಲು ಅಪಘಾತ ಕೇಸ್: ಸಿಬಿಐ ಬಂಧಿತ ಮೂವರು ಅಧಿಕಾರಿಗಳು ಸೇರಿ 7 ರೈಲ್ವೆ ನೌಕರರ ಅಮಾನತು