ಗುಂಟೂರು(ಆಂಧ್ರಪ್ರದೇಶ): ತೆಲುಗು ರಾಜ್ಯಗಳಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬಿ.ಟೆಕ್ ವಿದ್ಯಾರ್ಥಿನಿ ರಮ್ಯಾ ಕೊಲೆ ಪ್ರಕರಣದ ಅಪರಾಧಿ ಗುಂಟೂರು ಜಿಲ್ಲಾ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿತು. ಕಳೆದ ವರ್ಷ ಆಗಸ್ಟ್ 15ರಂದು ಹಾಡಹಗಲೇ ದುಷ್ಕರ್ಮಿ ಅಮಾನವೀಯ ಕೃತ್ಯ ಎಸಗಿದ್ದ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಂಗೋಪಾಲ್ ತೀರ್ಪು ಪ್ರಕಟಿಸಿದ್ದು, ರಾಜ್ಯದಲ್ಲಿ ನಡೆದಿರುವ ಪ್ರಕರಣಗಳಲ್ಲೇ ಇದೊಂದು ಅಪರೂಪದ ಪ್ರಕರಣ ಎಂದು ಪರಿಗಣಿಸಿದ್ದೇವೆ. ಸ್ವಾತಂತ್ರ್ಯ ದಿನದಂದು ನಡೆದ ಈ ಘಟನೆ ಸಾಕಷ್ಟು ಸಂಚಲನ ಮೂಡಿಸಿತ್ತು. ವಿಚಾರಣೆ ನಡೆಯುತ್ತಿರುವಾಗಲೇ ಆರೋಪಿ ಶಶಿ ಕೃಷ್ಣ ಕೋರ್ಟ್ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಾನು ಮಾಡಿರುವ ತಪ್ಪಿಗೆ ಆತ ಪಶ್ಚಾತ್ತಾಪ ಪಟ್ಟಿಲ್ಲ. ಹೀಗಾಗಿ, ಆತನಿಗೆ ಕಠಿಣ ಶಿಕ್ಷೆ ವಿಧಿಸಲು ಕೋರ್ಟ್ ಮುಂದಾಗಿದೆ. ಎಲ್ಲ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಮರಣದಂಡನೆ ಶಿಕ್ಷೆ ವಿಧಿಸುತ್ತಿದ್ದೇವೆ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ನಡುರಸ್ತೆಯಲ್ಲೇ ಬಿ.ಟೆಕ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ!
ಪ್ರಕರಣದ ಮತ್ತಷ್ಟು ವಿವರ: ಉಪಹಾರ ಸೇವಿಸಲು ಹೊರಟಿದ್ದ ಬಿ.ಟೆಕ್ ವಿದ್ಯಾರ್ಥಿನಿಯನ್ನು ನಡುರಸ್ತೆಯಲ್ಲಿ ಅಡ್ಡಗಟ್ಟಿದ್ದ ಆರೋಪಿ ಶಶಿಕೃಷ್ಣ ಮನಬಂದಂತೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಬೈಕ್ನಲ್ಲಿ ಪರಾರಿಯಾಗಿದ್ದ. ಘಟನೆಯ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. 4ನೇ ವರ್ಷದ ಬಿಟೆಕ್ ವಿದ್ಯಾರ್ಥಿನಿ ರಮ್ಯಾ ಕೊಲೆಗೀಡಾದ ಯುವತಿಯಾಗಿದ್ದಳು.
ಘಟನೆ ಬಳಿಕ ಕಾರ್ಯಪ್ರವೃತ್ತರಾದ ಗುಂಟೂರು ನಗರ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯನ್ನು ಬಂಧಿಸಿದ್ದರು. ಪೊಲೀಸರು ಬಂಧನಕ್ಕೆ ತೆರಳಿದ್ದ ವೇಳೆ ಆತ ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಗಾಯಗೊಂಡಿದ್ದ. ಬಳಿಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ತನಿಖೆ ನಡೆಸಲಾಗಿತ್ತು.
ತೀರ್ಪು ಹೊರಬರುತ್ತಿದ್ದಂತೆ ರಮ್ಯಾ ಪೋಷಕರು ಪೊಲೀಸ್ ಇಲಾಖೆ ಹಾಗೂ ಕೋರ್ಟ್ಗೆ ಧನ್ಯವಾದ ತಿಳಿಸಿದರು. 'ಅಪರಾಧಿಗೆ ಮರಣದಂಡನೆ ವಿಧಿಸಿದ್ದರಿಂದ ನನ್ನ ಮಗಳಿಗೆ ನ್ಯಾಯ ಸಿಕ್ಕಿದೆ ಎಂದು ಭಾವಿಸುತ್ತೇವೆ' ಎಂದರು.