ಜೈಪುರ: ಹಕ್ಕಿ ಜ್ವರ ಕಾರಣದಿಂದ ಕಾಗೆಗಳು ಮತ್ತು ಇತರ ಪಕ್ಷಿಗಳ ಸಾವಿನ ಹಿನ್ನೆಲೆ, ವಿಶೇಷ ಜಾಗರೂಕತೆ ವಹಿಸಿಸುವಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಗಳವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಶುಸಂಗೋಪನಾ ಇಲಾಖೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಅವರು, ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನ ಮತ್ತು ಇತರ ಅಭಯಾರಣ್ಯಗಳು, ಸಂಭರ್ ಸರೋವರ ಮತ್ತು ಪಕ್ಷಿಗಳು ಸೇರುವ ಎಲ್ಲಾ ಸ್ಥಳಗಳ ಮೇಲ್ವಿಚಾರಣೆಗೆ ವಿಶೇಷ ಗಮನ ನೀಡಬೇಕು ಎಂದು ಹೇಳಿದರು.
ಮೃತ ಪಕ್ಷಿಗಳ ದೇಹಗಳ ಮಾದರಿಗಳಲ್ಲಿ ಪಕ್ಷಿ ಜ್ವರ ಇರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಮಂಗಳವಾರ 200 ಪಕ್ಷಿಗಳ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜಸ್ಥಾನದಲ್ಲಿ ಸಾವನ್ನಪ್ಪಿದ ಪಕ್ಷಿಗಳ ಸಂಖ್ಯೆ 62ಕ್ಕೆ ತಲುಪಿದೆ, ರಾಜ್ಯದ 16 ಜಿಲ್ಲೆಗಳಲ್ಲಿ ಕಾಗೆಗಳು ಸೇರಿದಂತೆ ಪಕ್ಷಿಗಳ ಸಾವು ವರದಿಯಾಗಿದೆ ಎಂದು ಸಿಎಂ ಗೆಹ್ಲೋಟ್ ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ: ಭಾರತದಲ್ಲಿ ಮತ್ತೆ ಹಕ್ಕಿ ಜ್ವರ: ಇದು ಹೇಗೆ ಹರಡುತ್ತದೆ, ಮುಂಜಾಗ್ರತಾ ಕ್ರಮಗಳೇನು?
ಇದನ್ನು ತಡೆಗಟ್ಟುವ ಕ್ರಮಗಳನ್ನು ಖಾತ್ರಿಪಡಿಸಿಕೊಳ್ಳಬೇಕು. ಪಶುವೈದ್ಯರು ಮತ್ತು ಏವಿಯನ್ ತಜ್ಞರು ಈ ಘಟನೆಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ, ಪರಿಸ್ಥಿತಿ ಉಲ್ಬಣಗೊಳ್ಳದಂತೆ ತಡೆಯುವ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಇನ್ನೂ ತಮ್ಮ ಮನೆಗಳ ಬಳಿ ಯಾವುದೇ ಸತ್ತ ಹಕ್ಕಿಯನ್ನು ನೋಡಿದರೆ ಪಶುಸಂಗೋಪನಾ ಇಲಾಖೆ ಸ್ಥಾಪಿಸಿರುವ ನಿಯಂತ್ರಣ ಕೊಠಡಿಗಳಿಗೆ ತಿಳಿಸುವಂತೆ ಗೆಹ್ಲೋಟ್ ಸಾರ್ವಜನಿಕರಿಗೆ ಮನವಿ ಮಾಡಿದರು.
ಪಶುಸಂಗೋಪನಾ ವಿಭಾಗದ ಕಾರ್ಯದರ್ಶಿ ಅರುಶಿ ಮಲಿಕ್ ಮಾತನಾಡಿ, ರಾಜ್ಯದಲ್ಲಿ ಈವರೆಗೆ 625 ಪಕ್ಷಿಗಳು ಮೃತಪಟ್ಟಿವೆ ಮತ್ತು ಅದರಲ್ಲಿ 122 ಮಾದರಿಗಳನ್ನು ಭೋಪಾಲ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆಯೆಂದು ಮಾಹಿತಿ ನೀಡಿದರು.