ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಸಿಸಿಟಿವಿ ಕ್ಯಾಮೆರಾಗಳು ಮತ್ತು ತಡೆಗೋಡೆಗಳನ್ನು ದುಷ್ಕರ್ಮಿಗಳು ಮುರಿದಿದ್ದಾರೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದು,ಬಿಜೆಪಿ ಗೂಂಡಾಗಳು ಈ ದಾಳಿ ನಡೆಸಿದ್ದು, ಪೊಲೀಸರು ಅವರನ್ನು ತಡೆಯಲಿಲ್ಲ ಎಂದು ಆರೋಪಿಸಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಸಂಬಂಧಿಸಿದಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆ ವಿರೋಧಿಸಿ, ಸಿವಿಲ್ ಲೈನ್ಸ್ನಲ್ಲಿರುವ ಅವರ ನಿವಾಸದ ಹೊರಗೆ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಿತ್ತು. ಬೆಳಗ್ಗೆ 11.30ರ ಸುಮಾರಿಗೆ 150ರಿಂದ 200 ಪ್ರತಿಭಟನಾಕಾರರು ಸಿಎಂ ನಿವಾಸಕ್ಕೆ ಆಗಮಿಸಿದ್ದರು. ಮಧ್ಯಾಹ್ನ 1 ಗಂಟೆಯ ವೇಳೆಗೆ ಹಲವು ಪ್ರತಿಭಟನಾಕಾರರು ನಿವಾಸದೆದುರು ಬ್ಯಾರಿಕೇಡ್ ಮುರಿದು ಒಳ ಪ್ರವೇಶಿಸಿ, ಕೇಜ್ರಿವಾಲ್ ವಿರುದ್ಧ ಘೋಷಣೆ ಕೂಗಿ ಸಿಸಿಕ್ಯಾಮೆರಾಗೂ ಹಾನಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಡಿಸಿಪಿ ಸಾಗರ್ ಸಿಂಗ್ ಕಲ್ಸಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ದಾಳಿ ವಿಚಾರ ತಿಳಿದ ನಂತರ ಸ್ಥಳದಲ್ಲಿದ್ದ ಪೊಲೀಸರು 70 ಪ್ರತಿಭಟನಾಕಾರರನ್ನು ತಕ್ಷಣವೇ ಬಂಧಿಸಿದ್ದಾರೆ. ಪ್ರತಿಭಟನಾಕಾರರನ್ನು ಸ್ಥಳದಿಂದ ಚದುರಿಸಲಾಗಿದೆ. ಈ ಘಟನೆ ಕುರಿತು ಸಿವಿಲ್ ಲೈನ್ಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಿಂದ ಮೋದಿ ದೂರವಿರಬೇಕು, ಉಕ್ರೇನ್ ಪರ ಭಾರತ ನಿಲ್ಲಬೇಕು: ಸುಬ್ರಮಣಿಯನ್ ಸ್ವಾಮಿ