ಮುಂಬೈ (ಮಹಾರಾಷ್ಟ್ರ): ಚಂಡಮಾರುತ ಪೀಡಿತ ಮಹಾರಾಷ್ಟ್ರದ ಕೊಂಕಣ ಪ್ರದೇಶಕ್ಕೆ ಭೇಟಿ ನೀಡಿದ ಅವಧಿಯ ಬಗ್ಗೆ ಬಿಜೆಪಿಯ ಟೀಕೆಗಳ ಮಧ್ಯೆ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ನಾನು ಸ್ಥಳಕ್ಕೆ ಭೆಟಿ ನೀಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದು, ಹೆಲಿಕಾಪ್ಟರ್‌ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಗುಜರಾತ್‌ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದನ್ನು ಗುರಿಯಾಗಿಸಿಕೊಂಡು ಉದ್ಧವ್ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಚಂಡಮಾರುತ ಪೀಡಿತ ಮಹಾರಾಷ್ಟ್ರದ ಕೊಂಕಣ ಪ್ರದೇಶಕ್ಕೆ ಭೇಟಿ ನೀಡಿ ಕೇವಲ ಮೂರು ಗಂಟೆಗಳ ಕಾಲ ಪರಿಸ್ಥಿತಿ ಅವಲೋಕಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, "ಕೊಂಕಣ ಪ್ರದೇಶಕ್ಕೆ ಕೇವಲ ಮೂರು ಗಂಟೆಗಳ ಪ್ರವಾಸದ ಸಂದರ್ಭದಲ್ಲಿಯೂ ಠಾಕ್ರೆ ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿದರೆ ಆಶ್ಚರ್ಯವಾಯಿತು" ಎಂದು ಹೇಳಿದ್ದರು.
ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಪ್ರವೀಣ್ ದಾರೇಕರ್ ಅವರು, "ಚಂಡಮಾರುತದಿಂದ ಉಂಟಾದ ಹಾನಿಯ ವ್ಯಾಪ್ತಿಯನ್ನು ಸಿಎಂ ಕೇವಲ ಮೂರು ಗಂಟೆಗಳಲ್ಲಿ ಹೇಗೆ ಅರ್ಥಮಾಡಿಕೊಳ್ಳುತ್ತಾರೆ" ಎಂದು ಕೇಳಿದ್ದರು.
ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಠಾಕ್ರೆ "ನನ್ನ ಪ್ರವಾಸವು ನಾಲ್ಕು ಗಂಟೆಗಳ ಕಾಲ ನಡೆದರೆ ಪರವಾಗಿಲ್ಲ. ಕನಿಷ್ಠ ನಾನು ಪರಿಸ್ಥಿತಿಯ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಫೋಟೋ ಸೆಷನ್‌ಗಾಗಿ ಹೆಲಿಕಾಪ್ಟರ್‌ನಲ್ಲಿ ಹೋಗಲಿಲ್ಲ. ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಲು ನಾನು ಇಲ್ಲಿಗೆ ಬಂದಿಲ್ಲ" ಎಂದು ಹೇಳಿದ್ದಾರೆ.