ನವದೆಹಲಿ: ಬಿಹಾರದ ಲಖಿಸರೈ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದ 5 ಮಂದಿ ದಾರುಣವಾಗಿ ಸಾವನ್ನಪ್ಪಿದ (Actor Sushant Singh Rajput’s family killed by Road accident) ಘಟನೆ ನಡೆದಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸೋದರ ಮಾವ ಒಪಿ ಸಿಂಗ್ ಅವರ ಪತ್ನಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ವಾಪಸ್ಸಾಗುತ್ತಿದ್ದ ವೇಳೆ ಬಿಹಾರದ ಲಖಿಸರೈ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಟ್ರಕ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಈ ವೇಳೆ ಕಾರಿನಲ್ಲಿದ್ದ 10 ಜನರಲ್ಲಿ ಕಾರು ಚಾಲಕ ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದುರ್ಘಟನೆಯಲ್ಲಿ 4 ಮಂದಿ ತೀವ್ರ ಗಾಯಗೊಂಡಿದ್ದು, ಅವರನ್ನು ಪಟನಾ ಮತ್ತು ಲಖಿಸರೈ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಸುಶಾಂತ್ ಸಿಂಗ್ ಕುಟುಂಬದ ಲಾಲ್ಜಿತ್ ಸಿಂಗ್, ಅವರ ಮಕ್ಕಳಾದ ನೇಮಾನಿ ಸಿಂಗ್, ರಾಮಚಂದ್ರ ಸಿಂಗ್ ಮತ್ತು ಬೇಬಿದೇವಿ, ಅನಿತಾದೇವಿ ಮತ್ತು ಕಾರು ಚಾಲಕ ಪ್ರೀತಂಕುಮಾರ್ ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಬಲ್ಮುಕುಂದ್ ಸಿಂಗ್, ದಿಲ್ಖುಷ್ಸಿಂಗ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಸ್ಥಿತಿಯೂ ಗಂಭೀರವಾಗಿದೆ ಎನ್ನಲಾಗಿದೆ.