ಗುವಾಹಟಿ/ಐಜ್ವಾಲ್: ಕಳೆದ ಸೋಮವಾರ ಗಡಿಯಲ್ಲಿ ಹಿಂಸಾಚಾರ ಸಂಬಂಧ ಮಿಜೋರಾಂನ ರಾಜ್ಯಸಭಾ ಸದಸ್ಯ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 6 ಅಧಿಕಾರಿಗಳಿಗೆ ಅಸ್ಸೋಂ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ. ಗಲಾಟೆಯಲ್ಲಿ ಇವರ ಪಾತ್ರದ ಆರೋಪ ಹಿನ್ನೆಲೆಯಲ್ಲಿ ಸಮನ್ಸ್ ನೀಡಲಾಗಿದೆ. ಘರ್ಷಣೆಯಲ್ಲಿ ಎರಡೂ ರಾಜ್ಯಗಳಿಂದ 6 ಮಂದಿ ಭದ್ರತಾ ಸಿಬ್ಬಂದಿ ಹಾಗೂ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಿಜೋರಾಂ ಗಡಿ ಹಿಂಸಾಚಾರದ ವಿಚಾರದಲ್ಲಿ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಐಜಿ, ಡಿಐಜಿ ಹಾಗೂ ಜಿಲ್ಲಾಧಿಕಾರಿ ಸೇರಿದಂತೆ 6 ಮಂದಿ ಇತರೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಈ ನಡುವೆ ಮಿಜೋರಾಂ ಮುಖ್ಯಮಂತ್ರಿ ಜೊರಮಥಂಗ ಗಡಿ ವಿವಾದಕ್ಕೆ ಸೌಹಾರ್ದಯುತವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 2 ರಾಜ್ಯಗಳ ಗಡಿಗಳಲ್ಲಿ ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಅಸ್ಸೋಂ-ಮಿಜೋರಾಂ ಗಡಿ ಉದ್ವಿಗ್ನತೆಗೆ ಸೌಹಾರ್ದಯುತ ಪರಿಹಾರಕ್ಕಾಗಿ ನಾನು ಇನ್ನೂ ಆಶಿಸುತ್ತೇನೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಈ ಪ್ರದೇಶದ ಇತರ 6 ಜನ ಮುಖ್ಯಮಂತ್ರಿಗಳಾದ ಪ್ರೇಮ್ ಸಿಂಗ್ ತಮಂಗ್ (ಸಿಕ್ಕಿಂ), ಎನ್. ಬಿರೇನ್ ಸಿಂಗ್ (ಮಣಿಪುರ), ಪೆಮಾ ಖಂಡು (ಅರುಣಾಚಲ ಪ್ರದೇಶ), ನೀಫಿಯು ರಿಯೊ (ನಾಗಾಲ್ಯಾಂಡ್), ಕಾನ್ರಾಡ್ ಕೆ. .ಸಂಗ್ಮಾ (ಮೇಘಾಲಯ) ಹಾಗೂ ಬಿಪ್ಲಬ್ ಕುಮಾರ್ ದೇಬ್ (ತ್ರಿಪುರ) ಅವರಿಗೆ ಟ್ಯಾಗ್ ಮಾಡಿದ್ದಾರೆ.
ಮಿಜೋರಾಂನ ರಾಜ್ಯಸಭಾ ಸದಸ್ಯ ಕೆ.ವನ್ಲಾಲ್ವೇನಾ ಅವರಿಗೆ ಪೊಲೀಸ್ ಸಮನ್ಸ್ ನೀಡಲು ಸಿಐಡಿ ಅಧಿಕಾರಿಗಳನ್ನು ಒಳಗೊಂಡ 8 ಸದಸ್ಯರ ಪೊಲೀಸ್ ತಂಡ ಗುರುವಾರ ದೆಹಲಿಗೆ ಹೋಗಿದೆ ಎಂದು ಗುವಾಹಟಿಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅವರು ಆತನ ನಿವಾಸ ಮತ್ತು ದೆಹಲಿಯ ಮಿಜೋರಾಂ ಭವನದಲ್ಲಿ ಅವರನ್ನು ಕಾಣಲಿಲ್ಲ. ಸಮನ್ಸ್ ಅನ್ನು ಎರಡೂ ಸ್ಥಳಗಳಲ್ಲಿ ಬಾಗಿಲಿಗೆ ಅಂಟಿಸಿದ್ದಾರೆ. ಕೊಲಾಸಿಬ್ ಡಿಸಿ ಹೆಚ್. ಲಾಲ್ತ್‌ಲಂಗ್ಲಿಯಾನ ಹಾಗೂ ಎಸ್ಪಿ ವನ್ಲಾಲ್ಫಾಕ ರಾಲ್ಟೆ ಹಾಗೂ ಇತರೆ ಅಧಿಕಾರಿಗಳು ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಮಾತನಾಡಿರು, ಅಸ್ಸೋಂ ಪೊಲೀಸ್ ವಿಶೇಷ ಮಹಾನಿರ್ದೇಶಕ ಜಿ.ಪಿ.ಸಿಂಗ್, ಅಸ್ಸೋಂನ 6 ಮಂದಿ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿರುವ ಆರೋಪ ಸಂಬಂಧ ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಅಸ್ಸೋಂ ಧೋಲೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಂಗ್ ಹೇಳಿದರು.