ಅಸ್ಸೋಂ: ಡ್ರಗ್ಸ್ ವಿರುದ್ಧ ಸಮರ ಸಾರಿರುವ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಸುಮಾರು 163 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾದಕ ವಸ್ತು ಸರಬರಾಜು ಮಾರ್ಗವನ್ನು ಕತ್ತರಿಸುವುದು ಮತ್ತು ಉತ್ಪಾದನೆಯನ್ನು ನಿಲ್ಲಿಸುವುದು ನನ್ನ ರಾಷ್ಟ್ರೀಯ ಕರ್ತವ್ಯ ಎಂದು ಹೇಳಿದ್ದಾರೆ.
ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ವಿತರಕರನ್ನು ಮಟ್ಟ ಹಾಕಲು ಪೊಲೀಸರಿಗೆ ಸಂಪೂರ್ಣ ''ಕಾರ್ಯಾಚರಣೆಯ ಸ್ವಾತಂತ್ರ್ಯ'' ನೀಡಲಾಗಿದೆ. ರಾಜ್ಯದ ಜನರಲ್ಲಿ ಉಂಟಾಗಿರುವ ಡ್ರಗ್ಸ್ ಭೀತಿಯನ್ನು ಹೋಗಲಾಡಿಸಲು ಹಲವು ಪರಿಣಾಮಕಾರಿ ಕ್ರಮಗಳನ್ನು ಅಸ್ಸೋಂ ಸರ್ಕಾರ ಕೈಗೊಳ್ಳುತ್ತಿದೆ.
ಗೋಲಘಾಟ್‌ನಲ್ಲಿ ವಶಪಡಿಸಿಕೊಂಡ ಮಾದಕವಸ್ತು ವಿಲೇವಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಮುಖ್ಯಮಂತ್ರಿಯಾಗಿ, ನಾನು ಅಕ್ರಮ ಡ್ರಗ್ಸ್ ಮಾರಾಟ ಜಾಲದ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇನೆ ಎಂದು ಎಚ್ಚರಿಕೆ ಕೊಟ್ಟರು.
ಡ್ರಗ್ ವಿಲೇವಾರಿ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡ ಹಿಮಂತ ಬಿಸ್ವಾ ಶರ್ಮಾ, “ಅಸ್ಸಾಂನಲ್ಲಿ ಡ್ರಗ್ಸ್ನ ಕೊನೆಯ ವಿಧಿಗಳು ಎಂದು ಬರೆದಿದ್ದಾರೆ. ಇಲ್ಲಿನ ಹೊಜೈ ಎಂಬಲ್ಲಿ ವಶಪಡಿಸಿಕೊಂಡ ಡ್ರಗ್ಸ್ ವಿಲೇವಾರಿ ಕಾರ್ಯಕ್ರಮದಲ್ಲಿ 353.62 ಗ್ರಾಂ ಹೆರಾಯಿನ್, 736.73 ಕೆ.ಜಿ ಗಾಂಜಾ ಮತ್ತು 45,843 ಮಾತ್ರೆಗಳನ್ನು ನಾಶಪಡಿಸಲಾಗಿದೆ'' ಎಂದು ಬರೆದುಕೊಂಡಿದ್ದಾರೆ.
ಸರ್ಕಾರದೊಳಗಿನ ಜನರು ಕೂಡ ಈ ದಂಧೆಯಲ್ಲಿ ಭಾಗಿ:
ಎರಡು ವರ್ಷಗಳ ಹಿಂದೆ ಗೃಹ ಸಚಿವ ಅಮಿತ್ ಶಾ ಅವರು ಅಸ್ಸೋಂಗೆ ಭೇಟಿ ನೀಡಿದ ಸಂದರ್ಭದಲ್ಲಿ, ಮಾದಕ ವಸ್ತು ಪೂರೈಕೆ ಮಾರ್ಗಗಳನ್ನು ಕಡಿತಗೊಳಿಸಲು ಈಶಾನ್ಯ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರೊಂದಿಗೆ (ಡಿಜಿಪಿ) ಚರ್ಚೆ ನಡೆಸಿದ್ದರು. ಈ ಬಳಿಕ ರಾಜ್ಯದಲ್ಲಿ ಡ್ರಗ್ಸ್ ಪೂರೈಕೆ ವಿರುದ್ಧ ಕ್ರಮಗಳು ತೀವ್ರಗೊಂಡಿವೆ.
ಸರ್ಕಾರದೊಳಗಿನ ಜನರು ಸಹ ಈ ದಂಧೆಯಲ್ಲಿ ಭಾಗಿಯಾಗಿರುವುದರಿಂದ ಅದನ್ನು ಎದುರಿಸಲು ಪರಿಣಾಮಕಾರಿಯಾದ ಗುಪ್ತಚರ ಜಾಲ ಬಹಳ ಮುಖ್ಯ ಎಂದು ಸಿಎಂ ಶರ್ಮಾ ಹೇಳಿದ್ದಾರೆ.
ಅಸ್ಸೋಂನಲ್ಲಿ ಎರಡು ತಿಂಗಳ ಹಿಂದೆ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ 163 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಸೀಜ್ ಮಾಡಲಾಗಿತ್ತು. ರಾಜ್ಯದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಸುಮಾರು 1,493 ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ರೋಡ್ ರೋಲರ್ ಓಡಿಸಿ ಗಮನ ಸೆಳೆದ ಅಸ್ಸೋಂ ಸಿಎಂ ಹಿಮಂತ ಬಿಸ್ವಾ ಶರ್ಮಾ: video