ಚಂಡೀಗಢ: ಹರಿಯಾಣ ಸರ್ಕಾರ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ (56) ಅವರನ್ನು ಮತ್ತೊಮ್ಮೆ ವರ್ಗಾವಣೆ ಮಾಡಿದೆ. ಈ ಮೂಲಕ 29 ವರ್ಷಗಳ ಅವರ ವೃತ್ತಿ ಜೀವನದಲ್ಲಿ 54ನೇ ವರ್ಗಾವಣೆ ಆದಂತಾಗಿದೆ.
ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹರಿಯಾಣ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಖೇಮ್ಕಾ ಅವರನ್ನು ವರ್ಗಾಯಿಸಲಾಗಿದೆ. 1991ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಖೇಮ್ಕಾ ಅವರನ್ನು 1 ವರ್ಷ 11 ತಿಂಗಳ ಹಿಂದೆ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯ ಇಲಾಖೆಗೆ ವರ್ಗಾಯಿಸಲಾಗಿತ್ತು.
ಸರ್ಕಾರವು ಅವರ ವರ್ಗಾವಣೆಗೆ ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ. ಆದರೆ ಖೇಮ್ಕಾ, ರೋಜ್-ಕಾ-ಗುಜ್ಜರ್ ಮತ್ತು ಕೋಟ್ ಪ್ರದೇಶದಲ್ಲಿ ಪಟ್ಟಭದ್ರ ವಾಣಿಜ್ಯ ಹಿತಾಸಕ್ತಿಗಳಿವೆ. ದಮ್‌ದಾಮಾ, ಧೌಜ್ ಮತ್ತು ಶಿಲಾಕಾರಿಗಳಲ್ಲಿ ಕೆಲವರು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಸರ್ಕಾರದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಇದನ್ನೂ ಓದಿ: ಸಚಿವ ನವಾಬ್ ಮಲಿಕ್ ಆನ್‌ಲೈನ್‌ನಲ್ಲಿ ಬೆದರಿಕೆ ಹಾಕುತ್ತಿದ್ದಾರೆ: ಸಮೀರ್ ವಾಂಖೆಡೆ ಸಹೋದರಿ ದೂರು
ತಮ್ಮ ವರ್ಗಾವಣೆ ಬಗ್ಗೆ ಖಡಕ್ ಪ್ರತಿಕ್ರಿಯೆ ನೀಡಿರುವ ಖೇಮ್ಕಾ, ‘ಪ್ರಾಮಾಣಿಕತೆಗೆ ಪ್ರತಿಫಲವೆಂದರೆ ಅವಮಾನ. ಮತ್ತೊಮ್ಮೆ ವರ್ಗಾವಣೆ’ ಎಂದು ಟ್ವೀಟ್ ಮಾಡಿದ್ದಾರೆ.