ಲಕ್ನೋ(ಉತ್ತರ ಪ್ರದೇಶ): ರದ್ದಾದ ನೃತ್ಯ ಕಾರ್ಯಕ್ರಮದ ಟಿಕೆಟ್ ಹಣವನ್ನು ಮರುಪಾವತಿ ಮಾಡದ ಆರೋಪದ ಮೇಲೆ ಜನಪ್ರಿಯ ನೃತ್ಯಗಾರ್ತಿ ಸಪ್ನಾ ಚೌಧರಿ ವಿರುದ್ಧ ಲಕ್ನೋ ನ್ಯಾಯಾಲಯ ಸೋಮವಾರ ಬಂಧನ ವಾರಂಟ್ ಜಾರಿ ಮಾಡಿದೆ. ಹೆಚ್ಚುವರಿ ಮುಖ್ಯ ನ್ಯಾಯಾಧೀಶ ಶಾಂತನು ತ್ಯಾಗಿ ಅವರು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ನಿಗದಿಪಡಿಸಿದ್ದಾರೆ.
ನವೆಂಬರ್ 2021ರಲ್ಲಿ ಲಕ್ನೋ ನ್ಯಾಯಾಲಯ ಈ ಪ್ರಕರಣದಲ್ಲಿ ಸಪ್ನಾ ಚೌಧರಿ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಆಗ ಅವರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದರು. ಆದರೆ ಈ ಬಾರಿ ಡ್ಯಾನ್ಸರ್ ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ಹಾಜರಾಗಲಿಲ್ಲ, ಅದಕ್ಕೆ ಬದಲಾಗಿ ಅವರ ವಕೀಲರು ಯಾವುದೇ ವಿನಾಯಿತಿ ಅರ್ಜಿಯನ್ನೂ ಸಲ್ಲಿಸದೇ ಇದ್ದ ಕಾರಣ ನ್ಯಾಯಾಲಯ ಸಪ್ನಾ ಚೌಧರಿ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಇನ್‌ಸ್ಪೆಕ್ಟರ್ ಫಿರೋಜ್ ಖಾನ್ ಅವರು ಅಕ್ಟೋಬರ್ 14, 2018 ರಂದು ರಾಜಧಾನಿಯ ಆಶಿಯಾನಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಚೌಧರಿ ಜೊತೆಗೆ, ಕಾರ್ಯಕ್ರಮ ಸಂಘಟಕರಾದ ಜುನೈದ್ ಅಹ್ಮದ್, ನವೀನ್ ಶರ್ಮಾ, ಇವಾದ್ ಅಲಿ, ಅಮಿತ್ ಪಾಂಡೆ ಮತ್ತು ರತ್ನಾಕರ್ ಉಪಾಧ್ಯಾಯ ಅವರ ಹೆಸರೂ ಎಫ್ಐಆರ್ನಲ್ಲಿದೆ.
ಸ್ಮೃತಿ ಉಪವನದಲ್ಲಿ ಅಕ್ಟೋಬರ್ 13, 2018 ರಂದು ಮಧ್ಯಾಹ್ನ 3 ರಿಂದ ರಾತ್ರಿ 10 ರವರೆಗೆ ನೃತ್ಯ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು. ಅದೇ ನೃತ್ಯ ಕಾರ್ಯಕ್ರಮಕ್ಕೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ 300 ರೂ. ದರದಲ್ಲಿ ಟಿಕೆಟ್ಗಳೂ ಮಾರಾಟವಾಗಿತ್ತು. ಆದರೆ ಕಾರ್ಯಕ್ರಮ ನೀಡಲು ಸಪ್ನಾ ಚೌಧರಿ ಅವರು ಬಂದಿರಲಿಲ್ಲ. ಜೊತೆಗೆ ತಾವು ನೃತ್ಯ ಕಾರ್ಯಕ್ರಮ ನೀಡಲು ಪಡೆದಿದ್ದ ಹಣವನ್ನು ಹಿಂದಿರುಗಿಸಿಯೂ ಇರಲಿಲ್ಲ. ಇದರಿಂದಾಗಿ ಸ್ಥಳದಲ್ಲಿ ಕಾರ್ಯಕ್ರಮ ವೀಕ್ಷಿಸಲು ಸೇರಿದ್ದ ಜನ ಗಲಾಟೆ ಸೃಷ್ಟಿಸಿದ್ದರು.
ಇದನ್ನೂ ಓದಿ : ಉಜ್ಜಯಿನಿ ಮಹಾಕಾಲ ಪ್ರಸಾದಕ್ಕೆ ಅವಮಾನ: ಹೃತಿಕ್ ಜಾಹೀರಾತು ಹಿಂಪಡೆಯಲು ಆಗ್ರಹ