ಬೆಂಗಳೂರು : ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಇತ್ತೀಚೆಗೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಜೊತೆಗೆ ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯಿತ್, ರೈತ ಮುಖಂಡ ಯದುವೀರ್ ಸಿಂಗ್ ಸೇರಿದಂತೆ ರಾಷ್ಟ್ರೀಯ ರೈತ ಮುಖಂಡರ ಮೇಲೆ ಆಪಾದನೆಗಳು ಕೇಳಿ ಬಂದಿತ್ತು. ಇದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆಪಾದನೆ ಕೇಳಿ ಬರುತ್ತಿದ್ದಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಗಳೂರಿನ ಗಾಂಧಿಭವನದಲ್ಲಿ ರೈತ ಚಳವಳಿ-ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆ ಹಮ್ಮಿಕೊಂಡಿತ್ತು.
ಸಭೆಯಲ್ಲಿ ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯಿಯ್ ಸೇರಿ ರಾಷ್ಟ್ರಮಟ್ಟದ ರೈತ ಮುಖಂಡರು ಭಾಗಿಯಾಗಿದ್ದರು. ಸಭೆ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಕೇಶ್ ಟಿಕಾಯಿತ್, ನನ್ನ ಮೇಲೆ ಬಂದ ಆರೋಪಗಳೆಲ್ಲವೂ ಶುದ್ಧ ಸುಳ್ಳಾಗಿವೆ. ದೆಹಲಿಯಲ್ಲಿ ನಡೆದ ಪ್ರತಿಭಟನೆಗೆ ರಾಜ್ಯದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಕರೆದಿರಲಿಲ್ಲ.
ಅಲ್ಲದೆ ವೈರಲ್ ಆದ ಆಡಿಯೋ ಸಂಭಾಷಣೆಯಲ್ಲಿ ನನ್ನ ಹೆಸರು ತಳಕು ಹಾಕಿಕೊಂಡಿದೆ. ಹಣದ ವಿಚಾರವಾಗಿ ಯಾವೊಬ್ಬ ರೈತ ಮುಖಂಡನ ಜೊತೆಯಲ್ಲಿಯೂ ನಾನು ಮಾತನಾಡಿಲ್ಲ ಎಂದು ಹೇಳುತ್ತಿದ್ದಂತೆ, ಪತ್ರಕರ್ತರ ಸೋಗಿನಲ್ಲಿದ್ದ ಮೂವರು ಕಿಡಿಗೇಡಿಗಳು ಏಕಾಏಕಿ ವೇದಿಕೆ ಮೇಲೆ ಹತ್ತಿ ರಾಷ್ಟ್ರೀಯ ರೈತ ಮುಖಂಡರಾದ ರಾಕೇಶ್ ಟಿಕಾಯಿತ್, ಯದುವೀರ್ ಸಿಂಗ್ ಮೇಲೆ ಕಪ್ಪು ಮಸಿ ಎರಚಿದ್ದಾರೆ.
ಹಾಗೆಯೇ ಮಾಧ್ಯಮವೊಂದರ ಲೋಗೊ ಕೇಬಲ್‌ನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಮೋದಿ-ಮೋದಿ ಎಂದು ಘೋಷಣೆ ಕೂಗಿದ್ದಾರೆ. ಸಭೆಯಲ್ಲಿದ್ದ ರೈತ ಮುಖಂಡರು ಕಿಡಿಗೇಡಿಗಳನ್ನು ಹಿಡಿಯಲು ಹೋದಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಸಭಾಂಗಣದಲ್ಲಿದ್ದ ಕುರ್ಚಿಗಳಿಂದ ರೈತ ಮುಖಂಡರು ಹಲ್ಲೆ ನಡೆಸಿದ್ದಾರೆ.
ಇದರ ಪರಿಣಾಮ ಐದು ಕುರ್ಚಿಗಳು ಪುಡಿಪುಡಿಯಾಗಿವೆ. ಒಂದು ಕ್ಷಣ ಅಕ್ಷರಶಃ ಗಾಂಧಿಭವನ ರಣಾಂಗಣವಾಗಿ ಪರಿವರ್ತನೆಯಾಗಿತ್ತು. ಕೊನೆಗೆ ಮೂವರು ಕಿಡಿಗೇಡಿಗಳನ್ನು ಹಿಡಿದು ಹೈಗ್ರೌಂಡ್ಸ್ ಪೊಲೀಸರಿಗೆ ಒಪ್ಪಿಸಲಾಗಿದೆ. ವಿಚಾರಣೆ ವೇಳೆ ಭರತ್ ಶೆಟ್ಟಿ, ಪ್ರತಾಪ್, ಶಿವಕುಮಾರ್ ಎಂದು ಗೊತ್ತಾಗಿದ್ದು, ಕರವೇ ಕಾರ್ಯಕರ್ತರು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟನೆ ಇನ್ನೂ ಪೊಲೀಸರು ನೀಡಿಲ್ಲವಾದರೂ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ : ರಾಷ್ಟ್ರೀಯ ರೈತ ಮುಖಂಡರ ಮೇಲೆ ಹಲ್ಲೆಯಾಗುತ್ತಿದ್ದಂತೆ ಸಭೆಯಲ್ಲಿ ಭಾಗಿಯಾಗಿದ್ದ ವಿವಿಧ ಜಿಲ್ಲೆಗಳ ರೈತ ಮುಖಂಡರೆಲ್ಲರೂ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟಿಸಿದರು. ನ್ಯಾಯಕ್ಕಾಗಿ ಘೋಷಣೆ ಕೂಗಿದರು. ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದೇ ವೇಳೆ ಡಿಸಿಪಿ ಶರಣಪ್ಪ ಸ್ಥಳಕ್ಕೆ ದೌಡಾಯಿಸಿ ನಡೆದ ಘಟನೆ ಬಗ್ಗೆ ರೈತ ಮುಖಂಡರಿಂದ ಮಾಹಿತಿ ಪಡೆದರು. ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಆಗ ವೀರಶೈವ-ಲಿಂಗಾಯತ, ಈಗ ಆರ್ಯ-ದ್ರಾವಿಡ.. ಸಿದ್ದರಾಮಯ್ಯ ಒಡೆದಾಳುವ ರಾಜಕಾರಣಿ ಎಂದ ಪಿ ರಾಜೀವ್!