ಜೋಧಪುರ( ರಾಜಸ್ಥಾನ): ಜೋಧಪುರಕ್ಕೆ ಬಂದ 50 ಪಾಕಿಸ್ತಾನಿ ಹಿಂದೂಗಳನ್ನು ಗುಪ್ತಚರ ಇಲಾಖೆ ಪೊಲೀಸರು ವಶಕ್ಕೆ ಪಡೆದು ಮಾಹಿತಿ ಕಲೆಹಾಕಿದರು. ಜಮ್ಮು ತಾವಿ ಎಕ್ಸ್ಪ್ರೆಸ್ ರೈಲಿನ ಮೂಲಕ ಇವರು ಇಲ್ಲಿಗೆ ಆಗಮಿಸಿದ್ದರು. ಇದರ ಸುಳಿವು ಪಡೆದ ಗುಪ್ತಚರ ಅಧಿಕಾರಿಗಳು ಇವರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು.
ಈ ಎಲ್ಲ ಪ್ರಯಾಣಿಕರು ವೀಸಾಗಳಲ್ಲಿ ಜೋಧಪುರಕ್ಕೆ ಪ್ರಯಾಣಿಸುವ ಉಲ್ಲೇಖವಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಇಲ್ಲಿಗೆ ತಲುಪಿದ ಪ್ರಯಾಣಿಕರನ್ನು ತಡೆದು ನಿಲ್ಲಿಸಲಾಯಿತು. ಎಲ್ಲ ಪ್ರಯಾಣಿಕರಿಂದ ಮಾಹಿತಿ ಸಂಗ್ರಹಿಸಿ ಮುಂದೆ ಹೋಗಲು ಅವಕಾಶ ನೀಡಲಾಯಿತು.
ಗುಪ್ತಚರ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಪಾಕಿಸ್ತಾನದಿಂದ ಬಂದ ಎಲ್ಲ ಪ್ರಯಾಣಿಕರಿಂದ ಅವರ ಪರಿಚಯಸ್ಥರು ಮತ್ತು ಕುಟುಂಬ ಸದಸ್ಯರ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಇತರ ಪ್ರಮುಖ ಮಾಹಿತಿಯನ್ನು ಪಡೆಯಲಾಗಿದೆ. ಬಳಿಕ ಮುಂದೆ ಹೋಗಲು ಅವಕಾಶ ನೀಡಲಾಯಿತು. ಬಹುತೇಕ ಪ್ರಯಾಣಿಕರು ನಗರಕ್ಕೆ ಹೊಂದಿಕೊಂಡಿರುವ ಗ್ರಾಮಗಳಿಗೆ ತೆರಳಿದ್ದಾರೆ.
ಭಾರತ ಸರ್ಕಾರವು ಪಾಕಿಸ್ತಾನದಲ್ಲಿ ವಾಸಿಸುವ ಹಿಂದೂಗಳಿಗೆ ವೀಸಾ ನೀಡುವುದಾಗಿ ಘೋಷಿಸಿದ ನಂತರ ಗಡಿ ದಾಟಿ ಬರುವ ಹಿಂದೂಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇತ್ತೀಚೆಗಷ್ಟೇ 100ಕ್ಕೂ ಹೆಚ್ಚು ಪಾಕಿಸ್ತಾನಿ ಹಿಂದೂಗಳ ಗುಂಪು ವಾಘಾ ಗಡಿಯಿಂದ ಭಾರತವನ್ನು ಪ್ರವೇಶಿಸಿ ಜೋಧಪುರ ಮತ್ತು ಇತರ ಪ್ರದೇಶಗಳಿಗೆ ಬಂದಿತ್ತು.
ಇದನ್ನೂ ಓದಿ: ಪಾಕ್ನಲ್ಲಿ ಶತಮಾನದಷ್ಟು ಹಳೆಯದಾದ ಹಿಂದೂ ದೇಗುಲ ಭಾಗಶಃ ಧ್ವಂಸ: ಹಿಂದೂಗಳ ಮೇಲೆ ಹಲ್ಲೆಗೆ ಯತ್ನ!