ಜೈಪುರ(ರಾಜಸ್ಥಾನ): ಸೇನಾ ನೇಮಕಾತಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ಉದ್ಯೋಗಾಕಾಂಕ್ಷಿಗಳು ವರ್ಷಕ್ಕೊಮ್ಮೆ ಮಾತ್ರ ಅರ್ಜಿ ಸಲ್ಲಿಸಬೇಕು. ಮೊದಲು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ನೇಮಕಾತಿ ಯೋಜನೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬ್ರಿಗೇಡಿಯರ್ ಜಗದೀಪ್ ಚೌಹಾಣ್ ಅವರು, ಮೊದಲಿದ್ದ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಬದಲಿಸಿ ಅದನ್ನೀಗ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಸಿದ ಬಳಿಕ ನಡೆಸಲಾಗುವುದು. ಅಲ್ಲದೇ, ಓರ್ವ ಅಭ್ಯರ್ಥಿ ವರ್ಷದಲ್ಲಿ ಒಂದು ಬಾರಿ ಮಾತ್ರ ನೇಮಕಾತಿ ಕೋರಿ ಅರ್ಜಿ ಸಲ್ಲಿಸಬೇಕು. ಅದಕ್ಕಿಂತಲೂ ಹೆಚ್ಚು ಬಾರಿ ಅರ್ಜಿ ಹಾಕಿದಲ್ಲಿ ಊರ್ಜಿತವಾಗುವುದಿಲ್ಲ ಎಂದು ಹೇಳಿದರು.
ಸಾಮಾನ್ಯ ಪರೀಕ್ಷೆ ಮೊದಲು: ಈ ಮೊದಲು ಸೇನಾ ನೇಮಕಾತಿ ರ್ಯಾಲಿಗೆ ಅರ್ಜಿ ಕರೆದಾಗ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡೆಸಿ, ಅಲ್ಲಿ ಅರ್ಹತೆ ಪಡೆದವರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಆ ಪದ್ಧತಿಯನ್ನು ಕೈಬಿಟ್ಟು ಮೊದಲೇ ಸಾಮಾನ್ಯ ಪರೀಕ್ಷೆ ನಡೆಸಲಾಗುವುದು. ಇದರಿಂದ ಅಭ್ಯರ್ಥಿಗಳ ನೇಮಕ ಸುಲಭವಾಗಲಿದೆ ಎಂದು ತಿಳಿಸಿದರು.
ಸೇನೆಗೆ ಯೋಧರ ನೇಮಕಕ್ಕಾಗಿ ಸರ್ಕಾರ ಅರ್ಜಿ ಆಹ್ವಾನಿಸಿದೆ. ಇದೇ ಫೆಬ್ರವರಿ 16 ರಿಂದ ಮಾರ್ಚ್ 15 ರೊಳಗೆ ಅರ್ಜಿ ಸಲ್ಲಿಸಬೇಕು. ಹೊಸ ನೇಮಕಾತಿ ವ್ಯವಸ್ಥೆಯ ಮೊದಲ ಹಂತವು ನೇಮಕಾತಿ ಅಧಿಸೂಚನೆ, ಆನ್‌ಲೈನ್ ನೋಂದಣಿ, ಪ್ರವೇಶ ಕಾರ್ಡ್‌ಗಳ ವಿತರಣೆ, ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯ ನಡವಳಿಕೆ, ಫಲಿತಾಂಶಗಳ ಪ್ರಕಟಣೆಯನ್ನು ಹೊಂದಿರುತ್ತದೆ.
ಎರಡನೇ ಹಂತದಲ್ಲಿ ಪ್ರವೇಶ ಪತ್ರ ಮತ್ತು ಬಯೋಮೆಟ್ರಿಕ್ ಪರಿಶೀಲನೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ದೈಹಿಕ ಮಾಪನ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ಅಂತಿಮ ಅರ್ಹತೆಯ ತಯಾರಿಯನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.
ಹೆಚ್ಚು ಸೇನಾ ನೇಮಕಾತಿ: ಭದ್ರತೆಗಾಗಿ 2018 ರಿಂದ 2020ರ ವರೆಗಿನ 2 ವರ್ಷದ ಅವಧಿಯಲ್ಲಿ ದೇಶದಲ್ಲಿ 1 ಲಕ್ಷಕ್ಕೂ ಅಧಿಕ ಯುವಕರನ್ನು ಭಾರತೀಯ ಸೇನೆಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು. ಸೇನಾ ನೇಮಕಾತಿ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡಿದ ಅವರು, 2 ವರ್ಷಗಳಲ್ಲಿ ಸೇನೆಗೆ 1,34,003 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. 2021-22ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಅವಧಿಯಲ್ಲಿ ಭಾರತೀಯ ನೌಕಾಪಡೆಗೆ 20,272, ವಾಯುಪಡೆಗೆ 27,116 ನೇಮಕ ಮಾಡಿಕೊಳ್ಳಲಾಗಿದೆ. ಭಾರತೀಯ ಸಶಸ್ತ್ರ ಪಡೆಗಳ ಮಾನವಶಕ್ತಿಯ ಅಗತ್ಯತೆಗೆ ಅನುಗುಣವಾಗಿ ನೇಮಕಾತಿಗಳನ್ನು ಕೈಗೊಳ್ಳಲಾಗಿದೆ ಎಂದು ರಾಜನಾಥ್ ಸಿಂಗ್ ಸಂಸತ್ತಿಗೆ ಲಿಖಿತ ಉತ್ತರ ನೀಡಿದ್ದಾರೆ.
ಇನ್ನು, ಇದೇ ವೇಳೆ ರಕ್ಷಣಾ ಸಚಿವಾಲಯದ ರಾಜ್ಯ ಸಚಿವ ಅಜಯ್ ಭಟ್ ಈ ಬಗ್ಗೆ ಪ್ರತ್ಯೇಕ ಉತ್ತರ ನೀಡಿದ್ದು, ಕೊರೊನಾ ಸೋಂಕಿನ ಕಾರಣ ಸೇನಾ ನೇಮಕಾತಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.