ಪೂಂಚ್(ಜಮ್ಮು ಕಾಶ್ಮೀರ): ಇಬ್ಬರು ಪೊಲೀಸ್ ಸಿಬ್ಬಂದಿ ಹಾಗು ಸೇನೆಯ ಯೋಧರೊಬ್ಬರು ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯ ವೇಳೆ ಗಾಯಗೊಂಡಿದ್ದಾರೆ.
ಕಣಿವೆನಾಡಿನಲ್ಲಿ ಉಗ್ರರ ವಿರುದ್ಧ ಇದೇ ಮೊದಲ ಬಾರಿಗೆ ಸುದೀರ್ಘ ದಿನಗಳ ಕಾರ್ಯಾಚರಣೆ ನಡೆಯುತ್ತಿದೆ. ಇಂದು ಪೂಂಚ್ ಜಿಲ್ಲೆಯಲ್ಲಿ ಉಗ್ರರ ಜೊತೆ ಗುಂಡಿನ ಚಕಮಕಿ ನಡೆದಿದ್ದು ಭದ್ರತಾಪಡೆಗಳ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಲಷ್ಕರ್-ಇ-ತಯ್ಬಾ ಸಂಘಟನೆಯ ಉಗ್ರ ಡೆಟೆನೂ ಜಿಯಾ ಮುಸ್ತಫಾ ಎಂಬಾತನನ್ನು ಉಗ್ರರ ಅಡಗುತಾಣ ಪತ್ತೆಗೆ ಭಟಾಡುರಿಯನ್ ಎಂಬಲ್ಲಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಇತ್ತೀಚೆಗಷ್ಟೇ ಇಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೇನೆಯ ಮೂವರು ಅಧಿಕಾರಿಗಳು ಹುತಾತ್ಮರಾಗಿದ್ದರು.
ಅಡಗುತಾಣದ ಸಮೀಪ ತೆರಳುತ್ತಿದ್ದಾಗ ಉಗ್ರರು ಪೊಲೀಸರು ಮತ್ತು ಯೋಧರಿದ್ದ ಜಂಟಿ ತಂಡದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಪೊಲೀಸರು ಮತ್ತು ಓರ್ವ ಸೇನಾ ಯೋಧನಿಗೆ ಗಾಯವಾಗಿದೆ. ಇದರ ಜೊತೆಗೆ, ಉಗ್ರ ಜಿಯಾ ಮುಸ್ತಫಾನಿಗೂ ಗಾಯಗಳಾಗಿದೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.