ನಮ್ಸಾಯಿ (ಅರುಣಾಚಲ ಪ್ರದೇಶ): ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನ ನಡುವೆಯೇ ಭಾರತೀಯ ಸೇನೆಯು ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಪರ್ವತ ಪ್ರದೇಶಗಳಲ್ಲಿ ಎಂ 777 ಅಲ್ಟ್ರಾಲೈಟ್ ಹೊವಿಟ್ಜರ್‌ಗಳನ್ನು ನಿಯೋಜಿಸಲಾಗಿದೆ ಎಂದು ಸೇನಾಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
2020ರ ಜೂನ್ನಲ್ಲಿ ಗಾಲ್ವಾನ್ ಕಣಿವೆಯ ಘರ್ಷಣೆಯ ನಂತರ ಭಾರತ ಮತ್ತು ಚೀನಾದ ಸೇನೆಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು 3,500 ಕಿಲೋ ಮೀಟರ್ನ ಎಲ್‌ಎಸಿ ಉದ್ದಕ್ಕೂ ಭಾರತವು ತನ್ನ ಸೇನಾ ಸಾಮರ್ಥ್ಯ ಬಲ ಪಡಿಸಿಕೊಂಡು ಬರುತ್ತಿದೆ. ಇದರ ಮಧ್ಯೆ ಲಡಾಖ್ ಸೆಕ್ಟರ್‌ನ ಹಲವಾರು ಸೂಕ್ಷ್ಮ ಪ್ರದೇಶಗಳಲ್ಲಿ ಹೊವಿಟ್ಜರ್‌ಗಳನ್ನು ನಿಯೋಜಿಸಲಾಗಿದೆ.
ಮಾನವರಹಿತ ವೈಮಾನಿಕ ವಾಹನಗಳು, ಸೇನಾ ವಿಮಾನಗಳು ಮತ್ತು ಕಣ್ಗಾವಲು ಉಪಕರಣಗಳು ಸೇರಿದಂತೆ ಹೆಚ್ಚುವರಿ ವಾಯು ಸಲಕರಣೆಗಳೊಂದಿಗೆ ಎಂ 777 ಹೊವಿಟ್ಜರ್‌ಗಳ ನಿಯೋಜನೆಯು ಅರುಣಾಚಲ ಪ್ರದೇಶದ ವಲಯದಲ್ಲಿ ಭಾರತದ ಸೇನೆ ಸನ್ನದ್ಧತೆಯನ್ನು ಹೆಚ್ಚಿಸಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.
ಪರ್ವತ ಪ್ರದೇಶಗಳಲ್ಲಿ ಭಾರೀ ಫಿರಂಗಿ ಬಂದೂಕುಗಳನ್ನು ಸಾಗಿಸಲು ಸೇನೆಯು ಕಷ್ಟವನ್ನು ಎದುರಿಸಿತು. ಆದರೆ, ಈಗ ಅಲ್ಟ್ರಾಲೈಟ್ ಹೊವಿಟ್ಜರ್‌ಗಳ ನಿಯೋಜನೆಯಿಂದ ಇಂತಹ ಸಮಸ್ಯೆ ಇಲ್ಲ. ಚಿನೂಕ್ ಹೆಲಿಕಾಪ್ಟರ್‌ಗಳಲ್ಲಿ ಹೊವಿಟ್ಜರ್‌ಗಳನ್ನು ತ್ವರಿತವಾಗಿ ಸಾಗಿಸಬಹುದು. ಕಾರ್ಯಾಚರಣೆಯ ಅಗತ್ಯತೆಗಳ ಆಧಾರದ ಮೇಲೆ ಅವುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲು ಸಾಧ್ಯವಾಗಲಿದೆ. ಈಗ ನಾವು ಯಾವುದೇ ಘಟನೆಗಳನ್ನು ಎದುರಿಸಲು ಉತ್ತಮ ಸ್ಥಾನದಲ್ಲಿದ್ದೇವೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಬಮ್-ಲಾದಲ್ಲಿ ಸೇನೆಯು ಎಂ 777 ಗನ್‌ಗಳನ್ನು ನಿಯೋಜಿಸಿತ್ತು. ಆದರೆ, ಈಗ ಹಲವು ಪ್ರಮುಖ ಪರ್ವತ ಪ್ರದೇಶಗಳನ್ನು ಒಳಗೊಂಡಿರುವ ಅರುಣಾಚಲ ಪ್ರದೇಶದಲ್ಲಿ ಹೊವಿಟ್ಜರ್‌ಗಳನ್ನು ಸೇವೆಗೆ ನಿಯೋಜಿಸಲಾಗಿದೆ. ಅಲ್ಲದೇ, ಉತ್ತರ ಮತ್ತು ಪೂರ್ವ ವಲಯಗಳಲ್ಲಿ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸೇನೆಯು ಸಮಾನವಾಗಿ ಗಮನ ಹರಿಸುತ್ತಿದೆ. ಪ್ರತಿಯೊಂದು ಕಡೆಯು ಸೂಕ್ಷ್ಮ ವಲಯದಲ್ಲಿ ಎಲ್‌ಎಸಿ ಉದ್ದಕ್ಕೂ ಸುಮಾರು 50ರಿಂದ 60 ಸಾವಿರ ಸೈನಿಕರನ್ನೂ ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಅಖಂಡ ಭಾರತ ಮೊದಲ ಪ್ರಧಾನಿ ನೇತಾಜಿ: ಪ್ರಧಾನಿ ಮೋದಿ