ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಮುಂಗಾರು ಅಧಿವೇಶನವು ಗದ್ದಲದಿಂದ ಸ್ಥಗಿತವಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಪ್ರತಿಪಕ್ಷಗಳಿಗೆ ಕೈಜೋಡಿಸಿ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮಣಿಪುರದ ಪರಿಸ್ಥಿತಿ ಕುರಿತು ವಿರೋಧ ಪಕ್ಷಗಳು ಸೋಮವಾರ ಸಂಸತ್ತಿನಲ್ಲಿ ಜಂಟಿ ಪ್ರತಿಭಟನೆ ನಡೆಸಲು ಉದ್ದೇಶಿಸಿವೆ. ಈ ವಿಷಯದ ಬಗ್ಗೆ ಚರ್ಚೆ ಆರಂಭಿಸುವ ಮುನ್ನ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಹೇಳಿಕೆ ನೀಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ, ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಮಾತನಾಡುತ್ತಾರೆಯೇ ಹೊರತು ಪ್ರಧಾನಿ ಮೋದಿ ಅಲ್ಲ ಎಂದು ಸರ್ಕಾರ ಹೇಳುತ್ತಿದೆ.
ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಅನುರಾಗ್ ಠಾಕೂರ್, ಸಂತ್ರಸ್ತರು ಯಾವುದೇ ರಾಜ್ಯದವರಾಗಿರಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ನೋವಿನ ಸಂಗತಿ. ಇಂತಹ ಘಟನೆಗಳಿಗೆ ಕಡಿವಾಣ ಹಾಕುವುದು ರಾಜ್ಯದ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ರಾಜಸ್ಥಾನ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಣಿಪುರದಂತಹ ರಾಜ್ಯಗಳಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿಷಯದ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ತಾಕತ್ತಿದ್ದರೆ 'ಮಣಿಪುರ ಫೈಲ್ಸ್' ಸಿನಿಮಾ ಮಾಡಿ: ಕಾಶ್ಮೀರಿ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ನೆಟ್ಟಿಗರ ಸವಾಲು
ಎಲ್ಲ ರಾಜಕೀಯ ಪಕ್ಷಗಳು ಭಾಗವಹಿಸುವ ಸದನದಲ್ಲಿ ಈ ಬಗ್ಗೆ ಉತ್ತಮ ಚರ್ಚೆ ನಡೆಯಬೇಕು. ಯಾರೂ ಚರ್ಚೆಯಿಂದ ಓಡಿ ಹೋಗಬಾರದು. ಪ್ರತಿಪಕ್ಷಗಳಿಗೆ ಮತ್ತೊಮ್ಮೆ ಕೈಜೋಡಿಸಿ ವಿನಂತಿ ಮಾಡುತ್ತೇವೆ. ಚರ್ಚೆಗೆ ಬನ್ನಿ.. ಚರ್ಚೆಯಿಂದ ಓಡಿಹೋಗಬೇಡಿ ಎಂದು ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20ರಿಂದ ಪ್ರಾರಂಭವಾಗಿದೆ. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ಮೇಲಿನ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯ ಮಾಡುತ್ತಿವೆ. ಪ್ರಮುಖವಾಗಿ ಇಬ್ಬರು ಮಹಿಳೆಯರ ನಗ್ನ ಮರೆವಣಿಗೆ ಮಾಡಿದ ಘಟನೆ ಬಗ್ಗೆ ಪ್ರಧಾನಿ ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿಯಲಾಗಿದೆ. ಇದೇ ವಿಷಯವಾಗಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಗದ್ದಲ ಉಂಟಾಗಿದ್ದು, ಕಲಾಪ ಮುಂದೂಡಿಕೆಯಾಗಿದೆ.
ಮಹಿಳೆಯರ ನಗ್ನ ಮರೆವಣಿಗೆ ಘಟನೆಗೆ ಸಂಬಂಧಿಸಿದ್ದ ವಿಡಿಯೋ ವೈರಲ್ ಆದ ಬಳಿಕ ದೇಶಾದ್ಯಂತ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಈ ದುಷ್ಕೃತ್ಯದಲ್ಲಿ ಭಾಗಿಯಾದ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ, ಪರಿಶಿಷ್ಟ ಪಂಡಗದ ಮೀಸಲಾತಿ ವಿಷಯವಾಗಿ ಬುಡಕಟ್ಟು ಸಮುದಾಯದ ಕುಕಿಗಳು ಹಾಗೂ ಮೈತೇಯಿ ಸಮುದಾಯದ ನಡುವೆ ಮಣಿಪುರ ರಾಜ್ಯಾದ್ಯಂತ ಮೇ 3ರಿಂದ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಇದರಲ್ಲಿ ಇದುವರೆಗೆ160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಮಣಿಪುರ ಮಹಿಳೆಯರ ಮೇಲೆ ಅಮಾನುಷ ದೌರ್ಜನ್ಯ: ಬಾಲಾಪರಾಧಿ ಸೇರಿ 6 ಮಂದಿ ಸೆರೆ, ವಲಸೆ ಹೋಗದಂತೆ ಸರ್ಕಾರದ ಮನವಿ