ಶ್ರೀಕಾಕುಳಂ (ಆಂಧ್ರಪ್ರದೇಶ): ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ವಿರುದ್ಧ ಆಂಧ್ರ ಪ್ರದೇಶ ವಿಧಾನಸಭೆ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಚಂದ್ರಬಾಬು ತಮ್ಮ ಸೆಕ್ಯುರಿಟಿ ಕಮಾಂಡೋಗಳನ್ನು ನೋಡಿಕೊಂಡು ಓವರ್ ಆಕ್ಷನ್ ಮಾಡುತ್ತಿದ್ದಾರೆ. ಬ್ಲ್ಯಾಕ್ ಕಮಾಂಡೋಗಳನ್ನು ತೆಗೆದು ಹಾಕಿದರೆ ಅವರ ಕೆಲಸ ಮುಗಿಯುತ್ತದೆ ಎಂದು ತಮ್ಮಿನೇನಿ ಹೇಳಿದ್ದಾರೆ. ಈ ಹೇಳಿಕೆಯು ಆಂಧ್ರ ಪ್ರದೇಶದ ರಾಜಕೀಯಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ, ಟಿಡಿಪಿ ಮುಖಂಡರು ಸ್ಪೀಕರ್ ವಿರುದ್ಧ ಮುಗಿಬಿದ್ದಿದ್ದಾರೆ.
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಶ್ರೀಕಾಕುಳಂ ಜಿಲ್ಲೆಯ ಆಮುದಾಲವಲಸದಲ್ಲಿ ಪಕ್ಷದ ಮುಖಂಡರೊಂದಿಗೆ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಇದಕ್ಕೂ ಮುನ್ನ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಅವರ ಪ್ರತಿಮೆಗೆ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಮಾಧ್ಯಮಗೋಷ್ಠಿ ನಡೆಸಿ ಚಂದ್ರಬಾಬು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಂದ್ರಬಾಬು ಅಧಿಕಾರ ಇರದೇ ಇದ್ದರೆ ವಿಲವಿಲ ಎಂದು ಒದ್ದಾಡುತ್ತಾರೆ. ಇಷ್ಟೇ ಯಾಕೆ ತಮ್ಮ ಸೆಕ್ಯುರಿಟಿ ಕಮಾಂಡೋಗಳನ್ನು ತೆಗೆದು ಹಾಕಲು ಹೇಳಿ ಚಂದ್ರಬಾಬು ನಾಯ್ಡು ಫಿನಿಶ್ ಎಂದು ಸ್ಪೀಕರ್ ತಮ್ಮಿನೇನಿ ಸೀತಾರಾಮ್ ವಿವಾದ ಸೃಷ್ಟಿಸಿದ್ದಾರೆ. ಅಲ್ಲದೇ, ಯಾರನ್ನು ರಕ್ಷಿಸಲು ಇಷ್ಟೊಂದು ಬ್ಲ್ಯಾಕ್ ಕಮಾಂಡೋ ಭದ್ರತೆಯನ್ನು ಚಂದ್ರಬಾಬು ನಾಯ್ಡು ಹೊಂದಿದ್ದಾರೆ ಎಂದೂ ಪ್ರಶ್ನಿಸಿದರು.
ಮುಂದುವರಿದು, ರಾಜ್ಯ ವಿಧಾನಸಭೆಯ ಅಧ್ಯಕ್ಷರಾಗಿ ನಾನು, ಚಂದ್ರಬಾಬು ಒದಗಿಸಿರುವ ಭದ್ರತೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿಯೂ ಹೇಳಿಕೆ ನೀಡಿದ್ದಾರೆ. ಝೆಡ್ ಪ್ಲಸ್ ಶ್ರೇಣಿ ಭದ್ರತೆಗೆ ಅವರು ಹೇಗೆ ಅರ್ಹತೆ ಪಡೆದರು?. ದೇಶದ ಅನೇಕ ಜನರು ಎಚ್ಚರಿಕೆ ಹಾಗೂ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆಲ್ಲ ಈ ಮಟ್ಟದ ಭದ್ರತೆ ನೀಡಲಾಗುವುದೇ ಎಂದೂ ತಮ್ಮಿನೇನಿ ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ, ಈ ಹಿಂದೆ ಜಗನ್ ಅನನುಭವಿ ಮುಖ್ಯಮಂತ್ರಿ ಎಂದು ಚಂದ್ರಬಾಬು ದೂರಿದ್ದರು. ಈಗ ಅವರ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸರ್ಕಾರದ ಪ್ರಗತಿ ನೋಡಿ ಮಾತನಾಡಲಾಗದ ಪರಿಸ್ಥಿತಿ ಬಂದಿದೆ. ಪರಿಣಾಮಕಾರಿ ಆಡಳಿತ ಮತ್ತು ನೀತಿಯುತ ಆಡಳಿತ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರದ್ದು ಎಂಬುದರಲ್ಲಿ ಸಂದೇಹವಿಲ್ಲ ಎಂದು ಹೇಳಿದ್ದಾರೆ.
ಆದರೆ, ಚಂದ್ರಬಾಬು ನಾಯ್ಡು ಭ್ರಷ್ಟಾಚಾರ, ಅನ್ಯಾಯ, ಅಕ್ರಮ, ಅನಾಚಾರ ಎಂಬ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಎಷ್ಟೇ ಸುಳ್ಳು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಜನ ಇಲ್ಲ. ಮುಖ್ಯಮಂತ್ರಿ ಆಗುವ ವಿಚಾರವನ್ನು ಸಂಪೂರ್ಣವಾಗಿ ಮರೆಯಬೇಕು. ಜಗನ್ ಆಡಳಿತ ಇರುವವರೆಗೆ ಯಾರಿಗೂ ಅವಕಾಶ ಸಿಗುವುದಿಲ್ಲ. ಇನ್ನು ಮುಂದೆಯಾದರೂ ಚಂದ್ರಬಾಬು ನಾಯ್ಡುಗೆ ಬುದ್ಧಿ ಬರಬೇಕೆಂದು ಟೀಕಿಸಿದ್ದಾರೆ.
ಟಿಡಿಪಿ ನಾಯಕರ ಆಕ್ರೋಶ: ಸ್ಪೀಕರ್ ತಮ್ಮಿನೇನಿ ಸೀತಾರಾಂ ಅವರ ಈ ಹೇಳಿಕೆಗೆ ಟಿಡಿಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ತಮ್ಮಿನೇನಿ ಅವರಿಗೆ ಒತ್ತಾಯಿಸಿದ್ದಾರೆ. ಅಲ್ಲದೇ, ಸ್ಪೀಕರ್ ಹೇಳಿಕೆ ಬಗ್ಗೆ ಡಿಜಿಪಿಗೆ ಪತ್ರ ಬರೆಯಲಾಗಿದೆ. ಚಂದ್ರಬಾಬು ವಿರುದ್ಧದ ರಾಜಕೀಯ ಪಿತೂರಿಗಳ ಭಾಗವಾಗಿ ನಡೆದ ದಾಳಿಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಜೊತೆಗೆ ಹಲವು ಭದ್ರತಾ ಲೋಪಗಳು ನಡೆಯುತ್ತಿದ್ದು, ಭದ್ರತೆಯ ನಿಗಾ ಇಡಬೇಕು ಎಂದು ಡಿಜಿಪಿಗೆ ಪಕ್ಷದ ಮುಖಂಡರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಹೋರಾಟ: ಸಿಎಂ ಕೇಜ್ರಿವಾಲ್ಗೆ ಸೀತಾರಾಂ ಯೆಚೂರಿ ಬೆಂಬಲ