ಅಮರಾವತಿ (ಆಂಧ್ರ ಪ್ರದೇಶ): ಆಂಧ್ರ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ರೈತರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ವೈಎಸ್ಆರ್ ಸುನ್ನಾ ವಡ್ಡಿ ಪಂಟಾ ರುನಾಲು (ಶೂನ್ಯ ಬಡ್ಡಿ ಬೆಳೆ ಸಾಲ ಯೋಜನೆ) ಅಡಿ ಅರ್ಹ 14.5 ಲಕ್ಷ ರೈತರ ಖಾತೆಗೆ 510 ಕೋಟಿ ರೂಪಾಯಿ ಜಮಾ ಮಾಡಿದ್ದು, ಈ ಮೂಲಕ ರೈತರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ, 2019 ರ ಖಾರಿಫ್ ಬೆಳೆ ಸಾಲವನ್ನು ಒಂದು ವರ್ಷದ ನಿಗದಿತ ಅವಧಿಯಲ್ಲಿ ಮರುಪಾವತಿಸಿದ ರೈತರ ಬ್ಯಾಂಕ್ ಖಾತೆಗಳಿಗೆ ಬಡ್ಡಿರಹಿತ ಬೆಳೆ ಸಾಲವನ್ನು ಸಬ್ಸಿಡಿಯಾಗಿ ನೀಡಲಾಗಿದೆ ಎಂದು ಕೃಷಿ ಸಚಿವ ಕುರಸಲ ಕನ್ನಬಾಬು ತಿಳಿಸಿದ್ದಾರೆ.
510 ಕೋಟಿ ರೂಪಾಯಿಯ ಜೊತೆಗೆ ಇತ್ತೀಚಿಗೆ ತೀವ್ರ ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗಾಗಿ ಹೆಚ್ಚುವರಿಯಾಗಿ 135 ಕೋಟಿ ರೂಪಾಯಿ ನೀಡಲಾಗಿದೆ. ಜೂನ್ನಿಂದ ಸೆಪ್ಟೆಂಬರ್ ವರೆಗಿನ ಮಳೆಗೆ ಹಾನಿಯಾದ ಬೆಳೆಗೆ 135 ಕೋಟಿ ರೂಪಾಯಿ ನೀಡಲಾಗಿದೆ. ಸುಮಾರು 1.66 ಲಕ್ಷ ರೈತರು ಇದರ ಫಲಾನುಭವಿಗಳಾಗಲಿದ್ದಾರೆ ಎಂದಿದ್ದಾರೆ.
ಆಂಧ್ರ ಸರ್ಕಾರವು ರೈತ ಪರ ಸರ್ಕಾರ ಹೊಂದಿದ್ದು, ರೈತರ ಸಂಕಷ್ಟಕ್ಕೆ ಗರಿಷ್ಠ ಬೆಂಬಲ ನೀಡಲಿದ್ದೇವೆ ಹಾಗೂ ರೈತರಿಗೆ ಎಲ್ಲ ರೀತಿಯ ಉತ್ತರಗಳನ್ನು ನೀಡಲಿದ್ದೇವೆ ಎಂದು ಸಿಎಂ ಜಗನ್ ತಿಳಿಸಿದ್ದಾರೆ.
ರೈತ ಬಿತ್ತನೆ ಕಾರ್ಯ ಆರಂಭಿಸುವುದರಿಂದ ಹಿಡಿದು ಬೆಳೆ ಕೊಂಡುಕೊಳ್ಳುವವರೆಗೂ ಸರ್ಕಾರ ರೈತರ ಬೆಂಬಲಕ್ಕೆ ನಿಲ್ಲಲಿದೆ ಎಂದಿದ್ದಾರೆ. ಬಜೆಟ್ ಹಂಚಿಕೆಯಲ್ಲಿ ರೈತ ಬರೋಸಾ ಯೋಜನೆಯಡಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.