ನವದೆಹಲಿ: ಸಂಸತ್ ಮಾನ್ಸೂನ್ ಅಧಿವೇಶನ ಆರಂಭಗೊಂಡಾಗಿನಿಂದಲೂ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ, ಗದ್ದಲ, ಗಲಾಟೆ ಸಾಮಾನ್ಯವಾಗಿತ್ತು. ಇದರ ಮಧ್ಯೆ ರಾಜ್ಯಸಭೆಯ ಅಧ್ಯಕ್ಷರ ಮೇಲೆ ರೂಲ್ ಬುಕ್ ಎಸೆತ, ಅಲ್ಲಿನ ಮಾರ್ಷಲ್ಗಳ ಮೇಲೆ ಹಲ್ಲೆ ನಡೆಸಿರುವಂತಹ ಘಟನೆ ಸಹ ನಡೆದಿವೆ.
ಇದೇ ವಿಚಾರವಾಗಿ ಕೇಂದ್ರ ಸರ್ಕಾರ ಇದೀಗ ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದು, ಎಂಟು ಸಚಿವರು ಸುದ್ದಿಗೋಷ್ಠಿ ನಡೆಸಿ, ಪ್ರತಿಪಕ್ಷಗಳು ಕ್ಷಮೆಯಾಚನೆ ಮಾಡುವಂತೆ ಆಗ್ರಹಿಸಿದ್ದಾರೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್, ಅನುರಾಗ್ ಠಾಕೂರ್, ಪ್ರಹ್ಲಾದ್ ಜೋಶಿ ಸೇರಿದಂತೆ ಕೇಂದ್ರದ ಎಂಟು ಸಚಿವರು ಸುದ್ದಿಗೋಷ್ಠಿ ನಡೆಸಿದ್ದು, ಸದನದಲ್ಲಿ ಪ್ರತಿಪಕ್ಷಗಳು ನಡೆದುಕೊಂಡಿರುವ ವರ್ತನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಪ್ರತಿಪಕ್ಷಗಳ ಬೆದರಿಕೆ
ನಾವು ಮಸೂದೆ ಮಂಡನೆ ಮಾಡುತ್ತಿದ್ದ ವೇಳೆ ಸದನದಲ್ಲಿ ಪ್ರತಿಪಕ್ಷಗಳು ನಮಗೆ ಬೆದರಿಕೆ ಹಾಕಿರುವ ಘಟನೆ ಸಹ ನಡೆದಿದ್ದು, ಹೀಗಾಗಿ ಸಂಸತ್ ಎರಡು ದಿನ ಮುಂಚಿತವಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಬೇಕಾಯಿತು. ಮಸೂದೆ ಮಂಡನೆ ವೇಳೆ ಈ ರೀತಿಯಾಗಿ ನಡೆದುಕೊಂಡಿರುವ ಪ್ರತಿಪಕ್ಷಗಳು ಕ್ಷಮೆಯಾಚನೆ ಮಾಡಬೇಕು ಎಂದರು.
ಮುಂದೂಡಿಕೆಗೆ ಪ್ರತಿಪಕ್ಷಗಳೇ ಕಾರಣ: ಜೋಶಿ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ನಾವು ಸೋಮವಾರದವರೆಗೂ ಸದನ ನಡೆಸಲು ಮುಂದಾಗಿದ್ದೇವು. ಆದರೆ ಪ್ರತಿಪಕ್ಷಗಳು ನಡೆದುಕೊಂಡಿರುವ ವರ್ತನೆಯಿಂದಾಗಿ ಈ ನಿರ್ಧಾರ ಕೈಗೊಳ್ಳಬೇಕಾಯಿತು. ಒಬಿಸಿ, ಇನ್ಸೂರೆನ್ಸ್ ಬಿಲ್ ಮಂಡನೆ ವೇಳೆ ಸದನದಲ್ಲಿ ವಿಪಕ್ಷಗಳು ನಡೆದುಕೊಂಡಿರುವ ರೀತಿ ನಿಜಕ್ಕೂ ಆಘಾತ ಹುಟ್ಟಿಸುವಂತಿತ್ತು ಎಂದಿದ್ದಾರೆ.
ಇದನ್ನೂ ಓದಿರಿ: ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸಂಸದರು - ಮಾರ್ಷಲ್ಗಳ ನಡುವೆ ಫೈಟ್.. ಸಿಸಿಟಿವಿ ವಿಡಿಯೋ
ಪ್ರತಿಪಕ್ಷಗಳಿಂದಲೇ ಮಹಿಳಾ ಮಾರ್ಷಲ್ ಮೇಲೆ ಹಲ್ಲೆ: ಗೋಯಲ್
ರಾಜ್ಯಸಭೆಯಲ್ಲಿ ಮಹಿಳಾ ಸಂಸದೆ ಮೇಲೆ ಮಾರ್ಷಲ್ಗಳು ಹಲ್ಲೆ ಮಾಡಿದ್ದಾರೆಂದು ಪ್ರತಿಪಕ್ಷಗಳು ಆರೋಪಿಸಿವೆ. ಸದನದಲ್ಲಿ ಈ ರೀತಿ ನಡೆಯಲು ಸಾಧ್ಯವೇ ಇಲ್ಲ. ಮಾರ್ಷಲ್ಗಳ ಮೇಲೆ ಪ್ರತಿಪಕ್ಷದ ಸದಸ್ಯರು ಹಲ್ಲೆ ನಡೆಸಿರುವ ವಿಡಿಯೋ ಈಗಾಗಲೇ ಬಹಿರಂಗಗೊಂಡಿದೆ.
ರಾಜ್ಯಸಭೆಯಲ್ಲಿ 30 ಮಾರ್ಷಲ್ಗಳಿದ್ದು, 18 ಪುರುಷರು ಹಾಗೂ 12 ಮಹಿಳೆಯರಿದ್ದಾರೆ. ಹೊರಗಡೆಯಿಂದ 40 ಜನರನ್ನು ಕರೆದುಕೊಂಡು ಬರುವುದು ಹೇಗೆ ಸಾಧ್ಯ ಎಂದು ಪಿಯೂಷ್ ಗೋಯಲ್ ಪ್ರಶ್ನೆ ಮಾಡಿದ್ದಾರೆ.
ಅನುರಾಗ್ ಠಾಕೂರ್ ಮಾತನಾಡಿ, ಮೊದಲ ದಿನದಿಂದಲೂ ಸಂಸತ್ತಿನ ಮುಂಗಾರು ಅಧಿವೇಶನ ಹಾಳು ಮಾಡಲು ಪ್ರತಿಪಕ್ಷ ಯೋಜನೆ ಹಾಕಿಕೊಂಡಿದ್ದವು. ಮಾರ್ಷಲ್ಗಳ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದ್ದು,ಈ ವೇಳೆ ಸದನದ ಬಾಗಿಲು ಮುರಿಯಲು ಮುಂದಾಗಿರುವ ಘಟನೆ ಸಹ ನಡೆದಿದೆ ಎಂದಿದ್ದಾರೆ.