ಶ್ರೀನಗರ: ಶ್ರೀನಗರ ನಗರದ ಪಂಜಿನಾರಾ ಪ್ರದೇಶದ ಗ್ರಾಮೀಣ ಬ್ಯಾಂಕಿನ ಶಾಖೆಯೊಂದರಲ್ಲಿ ಇಂದು ಮಧ್ಯಾಹ್ನ ದರೋಡೆಕೋರರು ಲಕ್ಷಾಂತರ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ.
ಮುಖವಾಡ ಧರಿಸಿದ್ದ ದರೋಡೆಕೋರರು ಪಂಜಿನಾರಾ ಬಸ್ ನಿಲ್ದಾಣದ ಬಳಿ ಇರುವ ಗ್ರಾಮೀಣ ಬ್ಯಾಂಕ್ ಶಾಖೆಗೆ ನುಗ್ಗಿ ಸುಮಾರು 3,50,000 ರೂ. ದರೋಡೆ ಮಾಡಿಕೊಂಡು ಹೋಗಿದ್ದಾರೆ.
ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದು, ನಮ್ಮ ತಂಡವು ಸ್ಥಳಕ್ಕೆ ತಲುಪಿದೆ. ಅಲ್ಲಿ ನಡೆದ ಘಟನೆ ಬಗ್ಗೆ ಸತ್ಯಾಸತ್ಯತೆಗಳನ್ನು ಪತ್ತೆ ಮಾಡಿ, ಆರಂಭಿಕ ತನಿಖೆ ಪೂರ್ಣಗೊಂಡ ನಂತರ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮಾರ್ಚ್ 12 ರಂದು ಬಾರಮುಲ್ಲಾದ ಟ್ಯಾಂಗ್‌ಮಾರ್ಗ್ ಪ್ರದೇಶದಲ್ಲಿರುವ ಅದೇ ಬ್ಯಾಂಕಿನ ಶಾಖೆಯಿಂದ ಅಪರಿಚಿತ ಬಂದೂಕುಧಾರಿಗಳು 2.25 ಲಕ್ಷ ರೂ.ದೋಚಿ ಪರಾರಿಯಾಗಿದ್ದರು.