ಶ್ರೀನಗರ (ಜಮ್ಮು ಕಾಶ್ಮೀರ): ನಿನ್ನೆ ಭಯೋತ್ಪಾದಕರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶ್ರೀನಗರದ ಮಹಿಳೆಯೊಬ್ಬರು ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
ರಾಜಧಾನಿಯ ಅಮೀರಾ ಕಡಲ್ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಭದ್ರತಾ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಿನ್ನೆ ಭಯೋತ್ಪಾದಕರು ದಾಳಿ ನಡೆಸಿದ್ದು, ಈ ವೇಳೆ 20 ಕ್ಕೂ ಹೆಚ್ಚು ನಾಗರಿಕರು ಹಾಗೂ ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದರು. ಗ್ರೆನೇಡ್ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಮಹಿಳೆ ಶ್ರೀನಗರದ ಹಜರತ್‌ಬಾಲ್‌ನ ರಫಿಯಾ ನಜೀರ್ (20) ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ನಿನ್ನ ಶ್ರೀನಗರದ ಮೊಹಮ್ಮದ್ ಅಸ್ಲಾಂ ಮಖ್ದೂಮಿ (60) ಎಂಬುವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಶ್ರೀನಗರದಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ: ಓರ್ವ ಸಾವು, ಪೊಲೀಸ್ ಸೇರಿದಂತೆ 21 ಜನರಿಗೆ ಗಾಯ
ಘಟನೆಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಿಸಿಟಿವಿ ಸೇರಿದಂತೆ ಇತರ ಸಾಕ್ಷ್ಯಗಳಿಂದ ಆರೋಪಿಗಳ ಕುರಿತು ಸುಳಿವು ಪಡೆದುಕೊಂಡಿದ್ದು, ಶೀಘ್ರದಲ್ಲೇ ದಾಳಿಕೋರನನ್ನು ಬಂಧಿಸಲಾಗುವುದು ಎಂದು ಕಾಶ್ಮೀರ ವಲಯದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಹೇಳಿದ್ದಾರೆ.
ಅಮೀರ ಕಡಲ್ ಒಂದು ವಾಣಿಜ್ಯ ಪ್ರದೇಶವಾಗಿದ್ದು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಜಮಾಯಿಸುತ್ತಾರೆ. ಈ ವರ್ಷದ ಜನವರಿಯಲ್ಲಿ ಸಹ ಇಲ್ಲಿ ಇದೇ ರೀತಿಯ ದಾಳಿ ನಡೆದಿದ್ದು, 10 ನಾಗರಿಕರು ಗಾಯಗೊಂಡಿದ್ದರು.