ಇಂಫಾಲ್ (ಮಣಿಪುರ): ಈಶಾನ್ಯ ರಾಜ್ಯ ಮಣಿಪುರದಲ್ಲಿ ಕಳೆದ ಐದು ತಿಂಗಳಿಂದ ಹಿಂಸಾಚಾರ ನಡೆಯುತ್ತಲೇ ಇದೆ. ಇದರ ನಡುವೆ ಆಘಾತಕಾರಿ ಹಾಗೂ ಆತಂಕಕಾರಿ ವಿಡಿಯೋಗಳು ಒಂದರ ಹಿಂದೆ ಒಂದು ಎಂಬಂತೆ ಬೆಳಕಿಗೆ ಬರುತ್ತಿದೆ. ಇದೀಗ ಆ ವ್ಯಕ್ತಿಯೊಬ್ಬರನ್ನು ಜೀವಂತವಾಗಿ ಬೆಂಕಿ ಹಚ್ಚಿ ಸುಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಮಣಿಪುದರಲ್ಲಿ ನಡೆಯುತ್ತಿರುವ ಸಂಘರ್ಷದ ಭೀಕರತೆಯನ್ನು ನಿರೂಪಿಸುವಂತಿದೆ.
ಮೇ 3ರಂದು ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದೆ. ಕಳೆದು ತಿಂಗಳು ಕಳೆದರೂ ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ. ಸಾಕಷ್ಟು ಬಿಗಿ ಭದ್ರತೆ ಹಾಗೂ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ನಿರಂತರವಾಗಿ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿವೆ. ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮತ್ತೊಂದು ವಿಡಿಯೋ ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನನ್ನು ಸಜೀವ ದಹನ ಮಾಡಿರುವುದು ಸೆರೆಯಾಗಿದೆ. ಸೋಮವಾರ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಈ ಘಟನೆಯನ್ನು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: Manipur Violence: ಮಣಿಪುರ ಹಿಂಸಾಚಾರದ ಅಸಮರ್ಪಕ ನಿರ್ವಹಣೆ.. ಬಿಜೆಪಿಗೆ ಖ್ಯಾತ ನಟ ರಾಜ್‌ಕುಮಾರ್ ಸೋಮೇಂದ್ರ ರಾಜೀನಾಮೆ
ಮೇ 4ರಂದೇ ನಡೆದಿರುವ ಘಟನೆ?: ರಾಜ್ಯದಲ್ಲಿ ಜನಾಂಗೀಯ ಘರ್ಷಣೆ ಶುರುವಾದ ಮರುದಿನ ಎಂದರೆ, ಮೇ 4ರಂದೇ ಈ ವ್ಯಕ್ತಿಯನ್ನು ಜೀವಂತವಾಗಿ ಬೆಂಕಿ ಹಚ್ಚಿ ಸುಟ್ಟಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ವ್ಯಕ್ತಿಯನ್ನು ಲಾಲ್ ಡಿಂಗ್ ತಂಗಾ ಖೋಂಗ್‌ಸೈ ಅಲಿಯಾಸ್ ಲಾಲ್ ಜೇಮ್ಸ್ (37) ಎಂದು ಗುರುತಿಸಲಾಗಿದೆ. ಈತ ಕಾಂಗ್‌ಪೋಕ್ಪಿ ಜಿಲ್ಲೆಯ ಹೌಹಾಂಗ್ ಸಿಂಗ್ ಗ್ರಾಮದ ನಿವಾಸಿಯಾಗಿದ್ದು, ಸದ್ಯ ದೇಹವನ್ನು ಇಂಫಾಲ್‌ನ ಜವಾಹರಲಾಲ್ ನೆಹರೂ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆ (ಜೆಎನ್‌ಐಎಂಎಸ್)ನಲ್ಲಿ ಇರಿಸಲಾಗಿದೆ. ಈ ಘಟನೆ ಕುರಿತು ತನಿಖೆಯನ್ನು ಸಿಬಿಐಗೆ ವಹಿಸುವಂತೆ ಮಣಿಪುರದ ಪೊಲೀಸ್ ಮಹಾನಿರ್ದೇಶಕ ರಾಜೀವ್ ಸಿಂಗ್ ಸೂಚಿಸಿದ್ದಾರೆ ಎಂದು ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ವಿಡಿಯೋ ಕೇವಲ 7 ಸೆಕೆಂಡ್ ಇದ್ದು, ಇದರಲ್ಲಿ ವ್ಯಕ್ತಿಯನ್ನು ಸಜೀವ ದಹನ ಮಾಡುತ್ತಿರುವುದು ಹಾಗೂ ಪಕ್ಕದಲ್ಲಿ ಕೆಲವು ಆರೋಪಿಗಳು ನಿಂತಿರುವುದು ಸೆರೆಯಾಗಿದೆ. ಆದರೆ, ಯಾರ ಮುಖಗಳು ಕಾಣುವುದಿಲ್ಲ. ಕೇವಲ ಕಾಲುಗಳು ಮಾತ್ರ ವಿಡಿಯೋದಲ್ಲಿ ಕಾಣುತ್ತಿವೆ. ಜೊತೆಗೆ ಗುಂಡಿನ ಸದ್ದು ಕೇಳಿಸುತ್ತದೆ. ವಿಡಿಯೋ ಬೆಳಕಿಗೆ ಬಂದ ಕೂಡಲೇ ಈ ಘಟನೆಯನ್ನು ಚುರಚಂದಪುರದ ಐಟಿಎಲ್‌ಎಫ್ ಬುಡಕಟ್ಟು ಸಂಘಟನೆ ಖಂಡಿಸಿದೆ.
ಈ ಹಿಂದೆ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ್ದ ವೈರಲ್ ವಿಡಿಯೋ ಆಗಿತ್ತು. ಈ ಘಟನೆ ಬಯಲಿಗೆ ಬರುತ್ತಿದ್ದಂತೆ ದೇಶಾದ್ಯಂತ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಈ ಮಹಿಳೆಯರ ಬೆತ್ತಲೆ ಮೆರವಣಿಗೆ ಘಟನೆ ಸೇರಿದಂತೆ ರಾಜ್ಯದಲ್ಲಿ ನಡೆದ ಹಲವಾರು ಹಿಂಸಾಚಾರದ ಘಟನೆಗಳ ಬಗ್ಗೆ ಈಗಾಗಲೇ ಸಿಬಿಐ ತನಿಖೆ ನಡೆಸುತ್ತಿದೆ. ಪರಿಶಿಷ್ಟ ಪಂಗಡದ ಮೀಸಲಾತಿ ವಿಷಯವು ಕುಕಿ ಸಮುದಾಯ ಹಾಗೂ ಮೈತೇಯಿ ಸಮುದಾಯಗಳ ನಡುವೆ ಹಿಂಸಾಚಾರಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ ಜನಾಂಗೀಯವಲ್ಲ, ಇದು ಭಾರತೀಯ ಒಕ್ಕೂಟದ ವಿರುದ್ಧದ ಯುದ್ಧ: ಸಿಎಂ ಬಿರೇನ್ ಸಿಂಗ್