ಋಷಿಕೇಶ (ಉತ್ತರಾಖಂಡ): ಅಂಕಿತಾ ಭಂಡಾರಿ ಕೊಲೆ ಪ್ರಕರಣ ಸಂಬಂಧಿಸಿ, ಮಗಳಿಗೆ ನ್ಯಾಯ ದೊರಕಿಸಲು ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯ ದೊರಕಿಸಲು ಆರೋಪಿಗಳಿಗೆ ನಾರ್ಕೋ ಪರೀಕ್ಷೆ ನಡೆಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಮಗೆ ನ್ಯಾಯ ಸಿಗಬೇಕು, ನ್ಯಾಯ ಸಿಗುವವರೆಗೂ ಕಾನೂನು ಹೋರಾಟ ಮುಂದುವರಿಸುವುದಾಗಿ ಅಂಕಿತಾ ಹೆತ್ತವರು ಸ್ಪಷ್ಟವಾಗಿ ಹೇಳಿದ್ದಾರೆ
ಅಂಕಿತಾ ಅವರ ಪೋಷಕರಾದ ತಂದೆ ವೀರೇಂದ್ರ ಸಿಂಗ್ ಭಂಡಾರಿ ಮತ್ತು ತಾಯಿ ಸೋನಿ ದೇವಿ ಅವರು ನೈನಿತಾಲ್ ಹೈಕೋರ್ಟ್‌ನಿಂದ ಶ್ರೀಕೋಟ್‌ಗೆ (ಪೌರಿಗೆ) ಹಿಂದಿರುಗುವಾಗ ರಿಷಿಕೇಶದ ಕೋಯೆಲ್ ವ್ಯಾಲಿಯಲ್ಲಿ ಕಳೆದ 41 ದಿನಗಳಿಂದ ಅಂಕಿತಾ ಭಂಡಾರಿ ಕೊಲೆ ಪ್ರಕರಣ ಸಂಬಂಧಿಸಿ ನಡೆಯುತ್ತಿರುವ ಪ್ರತಿಭಟನೆಯ ಸ್ಥಳಕ್ಕೆ ತಲುಪಿದ್ದರು. ಇಲ್ಲಿ ಮಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಉಪವಾಸ ಮಾಡಿದ ಮಾತೃಶಕ್ತಿಯವರಿಗೆ, ಉಪವಾಸ ಮಾಡುತ್ತಿರುವ ಜನರಿಗೆ ಕೃತಜ್ಞತೆ ಸಲ್ಲಿಸಿದರು.
ಜೊತೆಗೆ, ಸರ್ಕಾರ ಎಸ್‌ಐಟಿ ತನಿಖೆ ನಡೆಸುತ್ತಿದೆ. ಆದರೆ ಈ ತನಿಖೆ ಮೇಲೆ ನಂಬಿಕೆ ಇಲ್ಲ. ಹಾಗಾಗಿ ನಾವು ಈ ಕೇಸನ್ನು ಸಿಬಿಐಗೆ ಒಪ್ಪಿಸಿ ಎಂದು ಹೇಳಿದರು ಯಾಕೆ ಸರ್ಕಾರ ವಿಳಂಬ ಮಾಡುತ್ತಿದೆ ಗೊತ್ತಿಲ್ಲ. ಆರೋಪಿಗಳಿಗೆ ನಾರ್ಕೋ ಟೆಸ್ಟ್ ಮಾಡಿಸಬೇಕು ಈ ಮೂಲಕ ಸತ್ಯವನ್ನು ಹೊರತೆಗೆದು ನನ್ನ ಮಗಳಿಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.
ಹಾಗೆ ತನ್ನ ಮಗಳಿಗಾಗಿ ಉಪವಾಸವಿದ್ದು ನಡೆಸುತ್ತಿರುವ ಹೋರಾಟ ಕೇವಲ ತಮ್ಮ ಮಗಳಿಗಾಗಿ ಮಾತ್ರವಲ್ಲ ಇಡೀ ಉತ್ತರಾಖಂಡದ ಹೆಣ್ಣು ಮಕ್ಕಳಿಗೆ ಭದ್ರತೆ ಒದಗಿಸುವುದಕ್ಕಾಗಿ ಎಂದು ಹೇಳಿದರು. ಇಂದು ತನ್ನ ಮಗಳಿಗೆ ಅನ್ಯಾಯವಾಗಿದೆ, ನಾಳೆ ಇನ್ಯಾವುದೇ ಮಗಳಿಗೆ ಇಂತಹ ಘಟನೆ ನಡೆಯದಿರಲಿ, ಅಂಕಿತಾಗೆ ನ್ಯಾಯ ಸಿಗುವುದು ಬಹಳ ಮುಖ್ಯ ಎಂದರು.
ಪ್ರಕರಣದ ಹಿನ್ನೆಲೆ: 19 ವರ್ಷದ ಅಂಕಿತಾ ಭಂಡಾರಿ ಪೌರಿ ಜಿಲ್ಲೆಯ ಯಮಕೇಶ್ವರದಲ್ಲಿರುವ ವನಂತ್ರಾ ರೆಸಾರ್ಟ್‌ನಲ್ಲಿ ಸ್ವಾಗತಕಾರರಾಗಿ ಕೆಲಸ ಮಾಡುತ್ತಿದ್ದರು. 18 ಸೆಪ್ಟೆಂಬರ್ 2022 ರ ರಾತ್ರಿ, ಅವಳು ಇದ್ದಕ್ಕಿದ್ದಂತೆ ರೆಸಾರ್ಟ್‌ನಿಂದ ಕಾಣೆಯಾಗಿರುತ್ತಾಳೆ. ಅಂಕಿತಾ ನಾಪತ್ತೆ ಪ್ರಕರಣದಲ್ಲಿ ಸೆ.23ರಂದು ಪೊಲೀಸರು ರೆಸಾರ್ಟ್ ಮಾಲೀಕ ಸೇರಿದಂತೆ ಪುಲ್ಕಿತ್ ಆರ್ಯ ಸೌರಭ್ ಮತ್ತು ಅಂಕಿತ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದರು.
ಸೆಪ್ಟೆಂಬರ್ 24 ರಂದು, ಆರೋಪಿಗಳ ಹೇಳಿಕೆಯ ಮಾಹಿತಿ ಮೇರೆಗೆ ಪೊಲೀಸರು ಅಂಕಿತಾ ಶವವನ್ನು ಕಾಲುವೆಯಿಂದ ಹೊರತೆಗೆದಿದ್ದರು. ತನಿಖೆ ನಡೆಯುತ್ತಲೆ ಇದೆ ಆದರೆ ನ್ಯಾಯ ಇನ್ನು ದೊರಕಿಲ್ಲ.
ಇದನ್ನೂ ಓದಿ: ಮೂರು ತಿಂಗಳಲ್ಲಿ ಒಂದೇ ಕುಟುಂಬದ ಮೂವರ ಸಾವು: ಸಮಾಧಿ ಬಳಿ ಯುವತಿಯ ಫೋಟೋ ಇಟ್ಟು ವಶೀಕರಣ