ಗ್ವಾಲಿಯರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ನಿವಾಸಿ, ವಿವಾಹಿತ ಮಹಿಳೆ ಅಂಜು ರಾಜಸ್ಥಾನದಿಂದ ಪಾಕಿಸ್ತಾನಕ್ಕೆ ತೆರಳಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ ಮಧ್ಯಪ್ರದೇಶ ಸರ್ಕಾರ ಸಹ ಸಂಪೂರ್ಣ ಅಲರ್ಟ್ ಆಗಿದೆ. ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ಸೂಚನೆಯ ಮೇರೆಗೆ ಗ್ವಾಲಿಯರ್ ಪೊಲೀಸರು ಅಂಜು ಕುಟುಂಬದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: Anju-Nasrullah Love Story: ಅಂಜುವನ್ನು ಒಪ್ಪಿಕೊಳ್ಳುವುದಿಲ್ಲ, ನನ್ನ ಮಕ್ಕಳೇ ನಿರ್ಧಾರ ತೆಗೆದುಕೊಳ್ತಾರೆ: ಪತಿ ಅರವಿಂದ್
ಎರಡು ಮಕ್ಕಳ ತಾಯಿ ಆಗಿರುವ ಅಂಜು ಫೇಸ್ಬುಕ್ನಲ್ಲಿ ಪರಿಚಯವಾದ ನಸ್ರುಲ್ಲಾ ಎಂಬಾತನಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದು, ಇಸ್ಲಾಂಗೆ ಮತಾಂತರವಾಗಿದ್ದು, ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಗ್ವಾಲಿಯರ್ ಜಿಲ್ಲೆಯ ಟೇಕನ್‌ಪುರದ ಬೋನಾ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿ, ಅಂಜುವಿನ ತಂದೆಯನ್ನು ವಿಚಾರಣೆ ನಡೆಸಿದ್ದಾರೆ. ಇದರೊಂದಿಗೆ ಅಂಜು ಮತ್ತು ಆಕೆಯ ತಂದೆಯ ಎಲ್ಲ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂಜುವಿನ ಇಡೀ ಕುಟುಂಬವು ಪೊಲೀಸರ ಕಣ್ಗಾವಲಿನಲ್ಲಿದೆ ಎಂದು ಗ್ವಾಲಿಯರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಸಿಂಗ್ ಚಾಂಡೆಲ್ ಹೇಳಿದ್ದಾರೆ.
ಅಂಜು ತಂದೆ ಹೇಳಿದ್ದೇನು?: ಮಗಳು ಅಂಜು ಅಳಿಯನಿಗೆ (ಅಂಜುವಿನ ಪತಿ ಅರವಿಂದ್ ಮೀನಾ) ಕರೆ ಮಾಡಿ ಮಕ್ಕಳನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳುತ್ತಿದ್ದಾಳೆ. ಮಕ್ಕಳು ನನ್ನವರು ಮತ್ತು ಅವರ ಮೇಲೆ ನನಗೆ ಹಕ್ಕಿದೆ ಎನ್ನುತ್ತಿದ್ದಾಳೆ. ಅಲ್ಲದೇ, ನನ್ನ ಅಳಿಯನಿಗೆ ಆಕೆ ಬೆದರಿಕೆ ಹಾಕುತ್ತಿದ್ದಾಳೆ. ಆದರೆ, ಈಗಾಗಲೇ ಆಕೆ ನನ್ನ ಪಾಲಿಗೆ ಸಾವನ್ನಪ್ಪಿದ್ದಾಳೆ ಎಂದು ಅಂಜು ತಂದೆ ಗಯಾಪ್ರಸಾದ್ ಥಾಮಸ್ ತಿಳಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿರುವ ಅಂಜು ಗ್ರಾಮದಲ್ಲಿ ಭದ್ರತಾ ಸಂಸ್ಥೆಗಳಿಂದ ನಿಗಾ: ಅಂಜು ಕುಟುಂಬದ ನೆರೆಹೊರೆಯವರ ವಿಚಾರಣೆ
ಮತ್ತೊಂದೆಡೆ, ಗ್ವಾಲಿಯರ್‌ನ ಪೊಲೀಸರು ಅಂಜು ಕುಟುಂಬದ ಬಗ್ಗೆ ಸಂಪೂರ್ಣ ಅಲರ್ಟ್ ಆಗಿದ್ದಾರೆ. ಗ್ವಾಲಿಯರ್ ಎಸ್ಪಿ ರಾಜೇಶ್ ಸಿಂಗ್ ಚಾಂಡೆಲ್ ಮಾತನಾಡಿ, ಅಂಜು ಕುಟುಂಬ ಬೋನಾ ಗ್ರಾಮದಲ್ಲಿ ವಾಸಿಸುತ್ತಿದೆ. ಅಲ್ಲಿ ಆಕೆಯ ತಂದೆ ಇದ್ದಾರೆ. ಅಂಜು ಕುಟುಂಬದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಸಂಬಂಧಿಕರ ಮೇಲೂ ಪೊಲೀಸರ ನಿಗಾ: ಅಂಜು ಕುಟುಂಬದ ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಎಸ್ಪಿ ರಾಜೇಶ್ ಸಿಂಗ್ ಹೇಳಿದ್ದಾರೆ. ಅಂಜುವಿನ ತಂದೆ ಮೊಬೈಲ್ ಮೂಲಕ ಯಾರೊಂದಿಗೆ ಮಾತನಾಡಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಇದಲ್ಲದೇ ಅಂಜು ಕುಟುಂಬಕ್ಕೆ ಎಲ್ಲೆಲ್ಲಿ ಸಂಬಂಧಿಕರಿದ್ದಾರೆ, ಅವರ ಹಿನ್ನೆಲೆ ಏನು ಎಂಬ ತನಿಖೆಗೆ ತಂಡ ರಚಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಈ ವೇಳೆ, ಭದ್ರತಾ ಸಂಸ್ಥೆಯ ಅಧಿಕಾರಿಗಳು ಕೂಡ ಅಂಜು ಕುಟುಂಬದ ಮೇಲೆ ನಿರಂತರ ನಿಗಾ ಇಟ್ಟಿದ್ದಾರೆ.